
ಬೆಂಗಳೂರು, ಮಾ.8- ಮನೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದಾಗಿ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಗದೀಶ ನಗರದಲ್ಲಿ ಚಿಕ್ಕ ಮನೆಯೊಂದರಲ್ಲಿ ವಾಸವಾಗಿದ್ದ ಸಮೀರ್ (13) ಮೃತಪಟ್ಟ ಬಾಲಕನಾಗಿದ್ದು, ಮತ್ತೊಬ್ಬ ಬಾಲಕ ಸಹೀರ್ (4 ವರ್ಷ 8 ತಿಂಗಳು)ನನ್ನು ಸೆಂಟ್ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯೊಬ್ಬರು ಇಂದು ಬೆಳಗ್ಗೆ 5 ಗಂಟೆ ಸಮಯದಲ್ಲಿ ಮನೆಗೆಲಸಕ್ಕೆ ಹೋಗುವ ಸಲುವಾಗಿ ತನ್ನಿಬ್ಬರು ಮಕ್ಕಳಿಗೆ ಒಳಗಿನಿಂದ ಚಿಲಕ ಹಾಕಿಕೊಂಡು ಮಲಗುವಂತೆ ಹೇಳಿ ತೆರಳಿದ್ದರು.
ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಅಡುಗೆ ಸಿಲಿಂಡರ್ನಿಂದ ಅನಿಲ ಸೋರಿಕೆ ಉಂಟಾದ ಪರಿಣಾಮ ಉಸಿರುಗಟ್ಟಿ ಸಮೀರ್ ಮೃತಪಟ್ಟರೆ, ಸಹೀರ್ ಸ್ಥಿತಿ ಗಂಭೀರವಾಗಿದ್ದು, ಈತನನ್ನು ಸೆಂಟ್ಜಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.