ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸೀಟು ಹಂಚಿಕೆಯ ಕಸರತ್ತು ಜೋರಾಗಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಕ್ಷೇತ್ರ ಹಂಚಿಕೆ ವಿಚಾರ ಚರ್ಚೆಗೆ ಬಂದಿತ್ತು. ಈಗ ಈ ವಿಚಾರಕ್ಕೆ ಸಂಬಂಧಿಸಿ ಇಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ದೆಹಲಿಯ ಸಫ್ದರ್ಜಂಗ್ ರಸ್ತೆಯಲ್ಲಿರುವ ದೇವೇಗೌಡರ ನಿವಾಸಕ್ಕೆ ರಾಹುಲ್ ಆಗಮಿಸಲಿದ್ದಾರೆ. ಅವರ ಮನೆಯಲ್ಲಿಯೇ ರಾಹುಲ್ ಉಪಹಾರ ಸೇವಿಸಲಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಇಬ್ಬರೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಸೋಮವಾರ ಕಾಂಗ್ರೆಸ್ – ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಸಲಾಗಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಸಮನ್ವಯ ಸಮಿತಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚೆಯಾದ ವಿಚಾರ ಲೋಕಸಭಾ ಟಿಕೆಟ್ ಹಂಚಿಕೆ. ಜೆಡಿಎಸ್ 12 ಸ್ಥಾನಗಳಿಗೆ ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್ 9 ಸ್ಥಾನ ನೀಡಲು ಒಪ್ಪಿತ್ತು. ರಾಜ್ಯ ನಾಯಕರ ಮಟ್ಟದಲ್ಲಿ ನಡೆದಿದ್ದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ದೇವೇಗೌಡ-ರಾಹುಲ್ ಭೇಟಿ ಮಹತ್ವ ಪಡೆದುಕೊಂಡಿದೆ.
ಮೈಸೂರು ತಮಗೇ ಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಸುಮಲತಾ ವಿಷಯಕ್ಕೆ ಸಂಬಂಧಿಸಿ ಮಂಡ್ಯ ಕ್ಷೇತ್ರ ಕಗ್ಗಂಟಿಗೆ ಸಿಲುಕಿದೆ. ಮಂಡ್ಯ ಕ್ಷೇತ್ರದಿಂದ ಮೊಮ್ಮೊಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿಬೇಕು ಎಂಬುದು ದೇವೆಗೌಡರ ಲೆಕ್ಕಾಚಾರ. ಆದರೆ, ಸುಮಲತಾ ಕಾಂಗ್ರೆಸ್ನಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಕೂಡ ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ.