![ramesh-jarkiholi-and-HDK-750](http://kannada.vartamitra.com/wp-content/uploads/2019/03/ramesh-jarkiholi-and-HDK-750-572x381.jpg)
ಬೆಂಗಳೂರು, ಮಾ.6- ಶಾಸಕ ಉಮೇಶ್ ಜಾದವ್ ರಾಜೀನಾಮೆ ನೀಡಿ ಇಂದು ಕಲಬುರಗಿಯಲ್ಲಿ ಬಿಜೆಪಿ ಸೇರುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ.
ಉಪಹಾರದ ನೆಪದಲ್ಲಿ ಇಂದು ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿ ಅತೃಪ್ತ ಶಾಸಕರಾದ ರಮೇಶ್, ನಾಗೇಂದ್ರ, ಮಹೇಶ್ ಕುಮಟಳ್ಳಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರ ಮಾತು ಕೇಳದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಅತೃಪ್ತರ ಮನವೊಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್ನಲ್ಲಿರುವ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿಗಳು ಮೂವರು ಶಾಸಕರೊಂದಿಗೆ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನವೊಲಿಕೆ ಏನೂ ಇಲ್ಲ. ಬೆಳಗ್ಗೆ ತಿಂಡಿಗೆ ಇಲ್ಲೇ ಆಹ್ವಾನ ಮಾಡಿದ್ದರು. ಯಾವುದೇ ಮಾತುಕತೆಯ ಅವಶ್ಯಕತೆಯೂ ಇಲ್ಲ. ಅವರ ನಡುವೆ ಯಾವುದೇ ಸಮಸ್ಯೆ ಇಲ್ಲ. ಅವರೆಲ್ಲ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದ ವಿಚಾರ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ರಮೇಶ್ ಜಾರಕಿಹೊಳಿಗೆ ಅಸಮಾಧಾನ ಇರುವುದು ನಿಜ. ಅದನ್ನು ಕಾಂಗ್ರೆಸ್ ನಾಯಕರು ಬಗೆಹರಿಸಬೇಕು. ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ. ಬಿಜೆಪಿ ಪಕ್ಷದವರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿಯಾಗಿದ್ದರು. ಅದಕ್ಕೆ ರಾಜಕೀಯ ಬೆರೆಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.