ಎಂ.ಎಂ.ಕಲಬುರ್ಗಿ ಹತ್ಯ ಪ್ರಕರಣ-ಎಸ್‍ಐಟಿ ತಂಡದಿಂದ ಆರೋಪಿಗಳ ವಿಚಾರಣೆ

ಬೆಂಗಳೂರು, ಮಾ.6- ಇತಿಹಾಸ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ವಿಶೇಷವೆಂದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಈ ಮೂವರೂ ಆರೋಪಿಗಳು ಶಾಮೀಲಾಗಿದ್ದರು. ಮಹಾರಾಷ್ಟ್ರದ ಮೆಕ್ಯಾನಿಕ್ ಹಾಗೂ ಉತ್ತರ ಕರ್ನಾಟಕದ ಇಬ್ಬರು ಯುವಕರು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.

ಸುಪ್ರೀಂಕೋರ್ಟ್ ಸೂಚನೆಯಂತೆ ಈಗಾಗಲೇ ಕಲಬುರ್ಗಿ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆ ನಡೆಸುತ್ತಿದೆ.

ಮೇಲ್ನೋಟಕ್ಕೆ ಎರಡೂ ಕೊಲೆ ಪ್ರಕರಣಗಳಲ್ಲೂ ಒಂದೇ ಸಾಮ್ಯತೆ ಕಂಡುಬಂದಿದ್ದರಿಂದ ಗೌರಿ ಹತ್ಯೆ ಮಾಡಿದವರೇ ಇತಿಹಾಸಕಾರ ಕಲಬುರ್ಗಿ ಅವರನ್ನೂ ಕೊಲೆ ಮಾಡಿದ್ದಾರೆಂಬ ಶಂಕೆ ತನಿಖಾಧಿಕಾರಿಗಳಿಗೆ ಕಾಡುತ್ತಿತ್ತು.

ಪುಣೆಯಲ್ಲಿ ಮೆಕ್ಯಾನಿಕ್ ಆಗಿದ್ದ ಯುವಕನೊಬ್ಬ ಹಿಂದೂ ವಿಚಾರಧಾರೆಗಳಿಗೆ ಆಕರ್ಷಿತನಾಗಿದ್ದ. ಹಿಂದೂ ಧರ್ಮ ಮತ್ತು ಇದರ ಸಂಪ್ರದಾಯಗಳನ್ನು ಕಡುವಾಗಿ ಟೀಕಿಸುತ್ತಿದ್ದ ಕಲಬುರ್ಗಿಯನ್ನು ಕೊಲೆ ಮಾಡಲು ಈತನು ಕೂಡ ಸಂಚು ರೂಪಿಸಿದ್ದ.

ಉತ್ತರ ಕರ್ನಾಟಕ ಭಾಗದ ಇಬ್ಬರು ಯುವಕರು ಕಲಬುರ್ಗಿಯನ್ನು ಮುಗಿಸಲು ಹೊಂಚು ಹಾಕಿದ್ದಾರೆಂಬುದನ್ನು ತಿಳಿದ ಈತ ಈ ಯುವಕರಿಗೆ ದ್ವಿಚಕ್ರ ವಾಹನವನ್ನು ನೀಡಿದ್ದ ಎಂಬ ಆರೋಪವಿದೆ.

ಇದರಂತೆ 2015 ಆಗಸ್ಟ್ 30ರಂದು ಬೆಳಗ್ಗೆ ಧಾರವಾಡದ ನಿವಾಸದಲ್ಲಿದ್ದ ಕಲಬುರ್ಗಿಯನ್ನು ಹಣೆಗೆ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದರು. ಇದೇ ಆರೋಪಿಗಳು ಗೌರಿ ಕೊಲೆಯಲ್ಲೂ ಶಾಮೀಲಾಗಿ ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದೇ ಇವರನ್ನು ವಿಚಾರಣೆಗೊಳಪಡಿಸಿದಾಗ ಕಲುಬುರ್ಗಿ ಹತ್ಯೆ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ