ನಕಲಿ ಎಟಿಎಂ ಕಾರ್ಡ್ ಬಳಸಿ ವೈದ್ಯರೊಬ್ಬರ ಎರಡು ಲಕ್ಷ ಡ್ರಾ ಮಾಡಿದ ಕಳ್ಳರು

ಹಾಸನ, ಮಾ.3-ಅಮಾಯಕರು ಮೋಸ ಹೋಗುವುದು ಸಾಮಾನ್ಯ. ಆದರೆ, ಖತರ್ನಾಕ್ ಗ್ಯಾಂಗ್‍ವೊಂದು ವೈದ್ಯರ ಖಾತೆಗೆ ಕನ್ನ ಹಾಕಿ ನಕಲಿ ಎಟಿಎಂ ಕಾರ್ಡ್ ಬಳಸಿ ಎರಡು ಲಕ್ಷ ಗುಳುಂ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ವಸೀಂ ಅಹಮ್ಮದ್ ಶರೀಫ್ ಎಂಬುವರ ಎಸ್‍ಬಿಐ ಬ್ಯಾಂಕ್‍ನ ಉಳಿತಾಯ ಖಾತೆಯಿಂದ ಕಳೆದ ಫೆ.25ರಂದು ಜಾರ್ಖಂಡ್‍ನ ಎಟಿಎಂ ಕೇಂದ್ರವೊಂದರಿಂದ ಒಂದು ಲಕ್ಷ ಡ್ರಾ ಮಾಡಿದ್ದು, 15 ನಿಮಿಷಗಳ ನಂತರ ಮತ್ತೆ ಒಂದು ಲಕ್ಷ ಹಣವನ್ನು ಡ್ರಾ ಮಾಡಲಾಗಿದೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಎಟಿಎಂ ಕಾರ್ಡ್ ಪಡೆದಿದ್ದು, ಯಾವುದೇ ಆನ್‍ಲೈನ್ ವ್ಯವಹಾರ ಮಾಡದಿದ್ದರೂ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ವಂಚಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪಟ್ಟಣದ ಎಸ್‍ಬಿಐ ಹಾಗೂ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟ ಹಣ ಕಳ್ಳರ ಪಾಲಾಗಿದ್ದು, ಬ್ಯಾಂಕ್‍ನ ಕೆಲ ಸಿಬ್ಬಂದಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದ ಬ್ಯಾಂಕ್‍ನಲ್ಲಿ ಹಣವಿಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಘಟನೆಗಳಿಗೆ ಬ್ಯಾಂಕ್‍ನವರೇ ಹೊಣೆಯಾಗಿದ್ದು, ನನ್ನ ಹಣವನ್ನು ವಾಪಸ್ ನೀಡಬೇಕೆಂದು ವೈದ್ಯರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ