ಬೆಂಗಳೂರು, ಫೆ.28- ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ಸಮಯ ಬಂದಾಗ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಉಂಟಾಗಿದೆ. ಶಿವರಾತ್ರಿ ವೇಳೆಗೆ ಜೆಡಿಎಸ್ನಿಂದ ಇಬ್ಬರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಸಚಿವ ಮಹೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಒಂದು ಸ್ಥಾನ ಹಾಗೂ ಜೆಡಿಎಸ್ ಪಾಲಿನ ಒಂದು ಸ್ಥಾನ ಸೇರಿದಂತೆ ಎರಡು ಸ್ಥಾನಗಳನ್ನು ಲೋಕಸಭೆ ಚುನಾವಣೆ ಅಧಿಸೂಚನೆಯೊಳಗೆ ಭರ್ತಿ ಮಾಡಲಾಗುತ್ತದೆ ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಹಲವು ಜೆಡಿಎಸ್ ಆಕಾಂಕ್ಷಿಗಳು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ಶುರುವಿಟ್ಟುಕೊಂಡಿದ್ದರು. ಸಂಪುಟಕ್ಕೆ ಎಂ.ಪಿ.ಕುಮಾರಸ್ವಾಮಿ ಮತ್ತು ಬಿ.ಎಂ.ಫಾರೂಕ್ ಅವರನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಮುಖ್ಯಮಂತ್ರಿಗಳು ಸದ್ಯ ಸಂಪುಟ ವಿಸ್ತರಣೆ ಇಲ್ಲ ಎಂದು ಸ್ಪಷ್ಟನೆ ನೀಡಿರುವುದರಿಂದ ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿದೆ.
ಈಗಾಗಲೇ ನಿಗಮ-ಮಂಡಳಿಗಳಿಗೆ ಸಂಸದೀಯ, ರಾಜಕೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.ಎಲ್ಲರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇಬ್ಬರು ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿತ್ತಾದರೂ ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ.
ಕನ್ನಡಿಗರೊಬ್ಬರು ಪ್ರಧಾನಿಯಾಗಲಿದ್ದಾರೆ ಎಂದು ತಾವು ತಿಳಿಸಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಏಕೆ ಆಗಬಾರದು. ಕಾಯ್ತಾ ಇರಿ. ರಾಜಕೀಯ ಏನಾದರೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.