ಗಡಿಯೊಳಗೆ ಪ್ರವೇಶ ಮಾಡಿದ ಪಾಕ್‍ನ ಮೂರು ಯುದ್ಧ ವಿಮಾನಗಳು-ವಿಮಾನಗಳನ್ನು ಹಿಮ್ಮೆಟ್ಟಿದ ಭಾರತೀಯ ವಾಯುಪಡೆ

ನವದೆಹಲಿ,ಫೆ.27-ನಿನ್ನೆಯಷ್ಟೇ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಅಡಗುತಾಣದಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಉಗ್ರರನ್ನು ವಾಯು ದಾಳಿ ಮೂಲಕ ಸಂಹಾರ ಮಾಡಿದ ಬೆನ್ನಲ್ಲೇ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಇಂದು ಭಾರತದ ಗಡಿಯೊಳಗೆ ನುಸುಳಿರುವ ಆತಂಕಕಾರಿ ಘಟನೆ ನಡೆದಿದೆ.

ಜಮ್ಮುಕಾಶ್ಮೀರದ ರಜೌರಿಯಲ್ಲಿ ಪಾಕಿಸ್ತಾನದ ಮೂರು ವಿಮಾನಗಳು ಇಂದು ಬೆಳಗ್ಗೆ ಭಾರತದ ಗಡಿಯೊಳಗೆ ನುಸುಳಿ ದಾಳಿ ನಡೆಸಲು ಮುಂದಾಗಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಭಾರತದ ವಾಯುಪಡೆ ವಿಮಾನಗಳು ವೈರಿ ಪಡೆಯ ಫೈಟರ್ ಜೆಟ್‍ಗಳನ್ನು ಹಿಮ್ಮೆಟ್ಟುವಲ್ಲಿ ಯಶಸ್ವಿಯಾಗಿವೆ.

ಇನ್ನೊಂದೆಡೆ ಜಮ್ಮುಕಾಶ್ಮೀರದ ಬುದ್ಗಾಂವ್‍ನಲ್ಲಿ ಭಾರತದ ಗಡಿಯನ್ನು ಕಾವಲು ಕಾಯುತ್ತಿದ್ದ ಮಿಗ್-21 ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲೆಟ್‍ಗಳು ದುರ್ಮರಣ ಹೊಂದಿದ್ದಾರೆ. ಈ ಘಟನೆ ಹಿಂದೆ ಪಾಕಿಸ್ತಾನದ ಕೈವಾಡವಿರುವ ಸಾಧ್ಯತೆ ಬ್ಗೆಯೂ ಸೇನಾ ಪಡೆಗಳು ಶಂಕೆ ವ್ಯಕ್ತಪಡಿಸಿದ್ದು, ಬೆಳಗ್ಗೆ ಇದ್ದಕ್ಕಿದ್ದಂತೆ ಪಾಕಿಸ್ತಾನದ ರಕ್ಷಣಾ ಪಡೆಗೆ ಸೇರಿದ ಮೂರು ಎಫ್16 ಯುದ್ದ ವಿಮಾನಗಳು ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯೊಳಗೆ ನುಸುಳಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಪಾಕ್ ಯುದ್ಧ ವಿಮಾನ ಭಾರತದ ಗಡಿಯೊಳಗೆ ಒಳನುಸುಳುತ್ತಿದ್ದಂತೆ ಎಚ್ಚೆತ್ತುಕೊಂಡ ವಾಯುಪಡೆ ವಿಮಾನಗಳು ಎಫ್16 ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿವೆ. ಮೀರಜ್, ಸುಕೋಯ್ ಸೇರಿದಂತೆ ಮತ್ತಿತರ ಯುದ್ಧ ವಿಮಾನಗಳು ತಕ್ಷಣವೇ ಸಂಭಾವ್ಯ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ.

ಪಾಕಿಸ್ತಾನದಿಂದ ಭಾರತದ ಮೇಲೆ ಯಾವುದೇ ಸಂದರ್ಭದಲ್ಲಿ ದಾಳಿ ನಡೆಯುವ ಸಾಧ್ಯತೆಯಿದ್ದು, ಹಿಂಸಾಪೀಡಿತ ಕಣಿವೆ ರಾಜ್ಯದ ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಿರುವುದರಿಂದ ನಡೆಯಬಹುದಾದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.

ವಿಮಾನ ಹಾರಾಟ ರದ್ದು:
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿರುವುದರಿಂದ ಜಮ್ಮುಕಾಶ್ಮೀರದಲ್ಲಿ ಸೇನಾ ಪಡೆ ಹೈ ಅಲರ್ಟ್ ಘೋಷಣೆ ಮಾಡಿದೆ.

ರಾಜಧಾನಿ ಶ್ರೀನಗರ, ಲೇಹ್, ರಜೌರಿ, ಜಮ್ಮು, ನೌಶೇರಾ, ಪಠಾಣ್‍ಕೋಟ್ ಸೇರಿದಂತೆ ಎಲ್ಲ ಕಡೆ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಕೆಲ ಉಗ್ರಗಾಮಿ ಸಂಘಟನೆಗಳು ವಿಮಾನ ಅಪಹರಣ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಹೇಳಿದೆ. ಹೀಗಾಗಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನಿನ್ನೆಯಷ್ಟೇ ಭಾರತದ ವಾಯುಸೇನೆ ಪಿಒಕೆಯಲ್ಲಿರುವ ಮುಜಾಫರಾಬಾದ್, ಬಾಲಕೋಟ್ ಮತ್ತು ಚಕೋತಿಯಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 350ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ