ಬೆಂಗಳೂರು, ಫೆ.25-ನಗರದ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಂದು ನಡೆದ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಚುನಾವಣೆ ಕಾಲದಲ್ಲಿ ಶಾಂತಿ ಕದಡುವ ಹುನ್ನಾರಗಳು ನಡೆಯುತ್ತವೆ. ಕ್ಷಿಪ್ರ ಕಾರ್ಯಶಕ್ತಿಗಳು ತಲೆ ಎತ್ತುತ್ತವೆ. ರಾಜಕೀಯ ಕಾರಣಗಳಿಗಾಗಿ ನಾನಾ ರೀತಿಯ ಒತ್ತಡಗಳು ಬರುತ್ತವೆ. ಅಧಿಕಾರಿಗಳು ಯಾವುದಕ್ಕೂ ಮಣಿಯಬಾರದು. ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.
ಈ ಹಿಂದೆ ನಡೆದ ಚುನಾವಣೆಗಳ ವೇಳೆ ಪೊಲೀಸರು ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಉಂಟಾಗದೆ ಶಾಂತಿಯುತವಾಗಿ ಚುನಾವಣೆಗಳು ನಡೆದವು. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಅದೇ ರೀತಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.
ಕೋಮು ದ್ವೇಷ, ಮೂಲಭೂತವಾದದ ನೆಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕದಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಅವಕಾಶ ನೀಡಬೇಡಿ ಎಂದರು.
ಜನಸಾಮಾನ್ಯರಿಗೆ ಕಿರುಕುಳ ನೀಡುವಂತಹ ಮೀಟರ್ ಬಡ್ಡಿ ವ್ಯವಹಾರಸ್ಥರು, ಭೂ ಕಬಳಿಕೆದಾರರು, ಭೂಗತ ಪಾತಕಿಗಳು ಯಾರೇ ಇದ್ದರೂ ಅವರನ್ನು ಮುಲಾಜಿಲ್ಲದೆ ಮಟ್ಟ ಹಾಕಿ. ರಿಯಲ್ ಎಸ್ಟೇಟ್ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ ಮಾಡಿದ್ದವರನ್ನು ಇತ್ತೀಚೆಗೆ ಎಡೆಮುರಿ ಕಟ್ಟುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಭಾವಿಗಳ ಹೆಸರು ಹೇಳಿಕೊಂಡು ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳುವವರಿಗೆ ಅವಕಾಶ ನೀಡಬೇಡಿ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಜನ ಸಾಮಾನ್ಯರಿಗೆ ತೊಂದರೆ ಕೊಡುವವರನ್ನು ಹದ್ದುಬಸ್ತಿನಲ್ಲಿಡಿ. ಅಂತಹ ಸಂದರ್ಭದಲ್ಲಿ ನಿಮ್ಮ ಮೇಲೆ ಯಾವುದೇ ಒತ್ತಡ ಬಂದರೂ ನಾನು ನಿಮ್ಮೊಂದಿಗಿದ್ದೇನೆ ಎಂದು ಸಿಎಂ ಭರವಸೆ ನೀಡಿದರು.
ಇತ್ತೀಚೆಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲಿ ಸಾಮಾಜಘಾತುಕ ಶಕ್ತಿಗಳು ಕೈ ಜೋಡಿಸಿರುವುದನ್ನು ನೋಡಿದ್ದೇವೆ. ಜನರನ್ನು ಸುಲಿಗೆ ಮಾಡಿ ಸಂಪಾದಿಸಿದ ಹಣವನ್ನು ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಲು ಬಳಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸರ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.
ತಪ್ಪುಗಳು ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಉತ್ತಮ. ಎಲ್ಲಾ ಸಂದರ್ಭದಲ್ಲೂ ನಾನು ಪೊಲೀಸರೊಂದಿಗೆ ಇರುತ್ತೇನೆ ಎಂದು ಹೇಳಿದರು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕುಳಿತು ಕಾಲಹರಣ ಮಾಡುವ ಬದಲಾಗಿ ಠಾಣೆಗಳಿಗೆ ಭೇಟಿ ನೀಡಬೇಕು. ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಜನರ ಸಮಸ್ಯೆ, ತೊಂದರೆ ಹಾಗೂ ಕಷ್ಟಗಳಿಗೆ ಸ್ಪಂದಿಸಬೇಕು. ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಸಿಎಂ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿನ ಅಪರಾಧ, ಕಾನೂನು ಸುವ್ಯವಸ್ಥೆ, ತಾಂತ್ರಿಕ ಕೇಂದ್ರ, ಗುಪ್ತಚರ ವಿಭಾಗಗಳು ಸೇರಿದಂತೆ ವಿವಿಧ ವಿಭಾಗಗಳಿಂದ ಕಳೆದ ಆರು ತಿಂಗಳ ವರದಿಯನ್ನು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಡಿಜಿಪಿ, ಎಡಿಜಿಪಿ, ಐಜಿಪಿ, ಡಿಐಜಿ, ಎಸ್‍ಪಿ, ಡಿಸಿಪಿ ರ್ಯಾಂಕ್‍ನ ಅಧಿಕಾರಿಗಳು ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಭೆಯ ಒಳಗೆ ಮೊಬೈಲ್‍ಗಳನ್ನು ನಿಷೇಧಿಸಲಾಗಿತ್ತು.
ಗೃಹ ಸಚಿವ ಎಂ.ಬಿ.ಪಾಟೀಲ್, ಡಿಜಿಪಿ ನೀಲಮಣಿ ಎನ್.ರಾಜು, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‍ಗೋಯಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.