ಬೆಂಗಳೂರು, ಫೆ.24- ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಇನ್ನೂ ನಿಗೂಢವಾಗಿದೆ.
ಯಲಹಂಕ ಉಪವಿಭಾಗ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು, ವಾಯುದಳದ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಆ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಕಾರುಗಳನ್ನು ನಿಲ್ಲಿಸಿದ್ದ ಪ್ರದೇಶದಲ್ಲಿ ಹೆಚ್ಚಾಗಿ ಹುಲ್ಲು ಬೆಳೆದಿತ್ತು. ಕಾರಿನ ಬ್ಯಾಟರಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಅಥವಾ ಯಾರಾದರೂ ಸಿಗರೇಟ್ ಸೇದಿ ಬಿಸಾಡಿದ ತುಂಡಿನಿಂದ ಬೆಂಕಿ ಹೊತ್ತಿಕೊಂಡಿರಬಹುದು. ಇವೇ ಮುಂತಾದ ದೃಷ್ಟಿಕೋನದಲ್ಲಿ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಎಫ್‍ಎಸ್‍ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡು 272 ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ. 30 ರಿಂದ 40 ಕಾರುಗಳು ಭಾಗಶಃ ಸುಟ್ಟು ಹೋಗಿದ್ದು, ಭಾಗಶಃ ಸುಟ್ಟುಹೋದ ವಾಹನಗಳನ್ನು ವಾರಸುದಾರರು ತೆಗೆದುಕೊಂಡು ಹೋಗಿದ್ದಾರೆ.