ಕಾರು ಕಳೆದುಕೊಂಡವರ ನೆರವಿಗೆ ಹೆಲ್ಪ್ ಡೆಸ್ಕ್

ಬೆಂಗಳೂರು, ಫೆ.24- ಯಲಹಂಕ ವಾಯು ನೆಲೆ ಪಾರ್ಕಿಂಗ್‍ನ ಅಗ್ನಿ ದುರಂತದಲ್ಲಿ ಕಾರು ಗಳನ್ನು ಕಳೆದುಕೊಂಡವರ ಸಹಾಯಕ್ಕಾಗಿ ಪೊಲೀಸರು, ಆರ್‍ಟಿಒ, ಇನ್ಸೂರೆನ್ಸ್ ಅಧಿಕಾರಿಗಳು ಧಾವಿಸಿದ್ದಾರೆ.

ಕಾರು ಕಳೆದುಕೊಂಡವರ ನೆರವಿಗಾಗಿ ಪೊಲೀಸ್, ಆರ್‍ಟಿಒ, ಇನ್ಸೂರೆನ್ಸ್‍ನ ಮೂರು ಹೆಲ್ಪ್ ಡೆಸ್ಕ್‍ಗಳನ್ನು ಮಾಡಲಾಗಿದೆ. ಇದಲ್ಲದೆ ಯಲಹಂಕ ಪೊಲೀಸ್ ಠಾಣೆಯಲ್ಲೂ ಹೆಲ್ಪ್ ಡೆಸ್ಕ್ ಮಾಡಲಾಗಿದ್ದು ಅಗ್ನಿ ಅನಾಹುತದಲ್ಲಿ ಕಾರು ಕಳೆದು ಕೊಂಡವರು ತಮ್ಮ ದಾಖಲೆಗಳನ್ನು ತಂದು ಕೊಡಬಹುದು. ಪೊಲೀಸ್ ಹೆಲ್ಪ್ ಲೈನ್‍ನಲ್ಲಿರುವವರು ಯಾವ ಯಾವ ದಾಖಲೆಗಳನ್ನು ಸಲ್ಲಿಸಬೇಕು. ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ನೀಡುತ್ತಿದೆ.

ಇಂದು ಬೆಳಿಗ್ಗೆ 9.00ಗಂಟೆಯಿಂದಲೇ ಆರ್‍ಟಿಒ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ. ಭಾನುವಾರವಾದರು ರಜೆ ಪಡೆಯದೆ ಆರ್‍ಟಿಒ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಮುಂದಾಗಿದ್ದಾರೆ.

ಯಲಹಂಕದ ಸಿಂಗನಾಯಕನಹಳ್ಳಿ ಆರ್‍ಟಿಒ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಅಗ್ನಿದುರಂತದಲ್ಲಿ ಕಾರು ಕಳೆದುಕೊಂಡವರ ಮಾಹಿತಿ ಕಲೆಹಾಕುತ್ತಿದ್ದು, ಅವರಿಗೆ ವಿಮೆ ಹಣ ದೊರಕಿಸಿಕೊಡುವ ವ್ಯವಸ್ಥೆ ಮಾಡಲು ಸಹಕರಿಸುತ್ತಿದ್ದಾರೆ.

ಯಲಹಂಕ ಆರ್‍ಟಿಒ ಕಚೇರಿ ಕೆಲದಿನಗಳ ಹಿಂದಷ್ಟೆ ಸ್ಥಳಾಂತರ ಗೊಂಡಿತ್ತು. ಈಗ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಹೊಸ ಆರ್‍ಟಿಒ ಕಚೇರಿಯನ್ನು ತೆರೆಯಲಾಗಿದ್ದು, ಸ್ಥಳಾಂತರದಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು ಗೊಂದಲ ಪರಿಹರಿಸಲು ಸಿಬ್ಬಂದಿ ಸಹಕರಿಸುತ್ತಿದ್ದಾರೆ. ಈ ಕಚೇರಿಗೆ ಹೆಬ್ಬಾಳ, ಬ್ಯಾಟರಾಯನಪುರ, ಅಳ್ಳಾಳಸಂದ್ರ, ಎನ್‍ಇಎಸ್ ಪುಟ್ಟೇನಹಳ್ಳಿ, ಸಿಆರ್‍ಪಿಎಫ್ ಸಿಂಗನನಾಯಕನ ಹಳ್ಳಿಯಿಂದ ಎಡತಿರುವು ಪಡೆದು ಯಲಹಂಕ -ದೊಡ್ಡಬಳ್ಳಾಪುರ ರಸ್ತೆಯಿಂದ 2.5ಕಿ.ಮೀ ಬರಬೇಕು. ಬಸ್ ವ್ಯವಸ್ಥೆ ಇಲ್ಲದ ಕಾರಣ ಆಟೋ ಅಥವಾ ಸ್ವಂತ ವಾಹನಗಳಲ್ಲಿ ಬರಬೇಕಾಗಿದೆ.

ನಿನ್ನೆಯಷ್ಟೆ ತಮ್ಮ ಬೆಲೆಬಾಳುವ ಕಾರುಗಳನ್ನು ಕಳೆದುಕೊಂಡಿರುವ ಶಾಕ್‍ನಲ್ಲಿರುವ ಜನ ಅವುಗಳ ದಾಖಲಾತಿಗಳನ್ನು ಹಿಡಿದು ಆರ್‍ಟಿಒ ಕಚೇರಿಗೆ ತೆರಳುತ್ತಿದ್ದಾರೆ. ವಿವಿಧ ಇನ್ಯೂರೆನ್ಸ್ ಕಂಪನಿಗಳವರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಾರು ಕಳೆದುಕೊಂಡ ಸಂತ್ರಸ್ತರಿಗೆ ಕ್ಲಿಯರೆನ್ಸ್ ಮಾಡಿಕೊಡಿ ಎಂಬ ಸೂಚನೆಯನ್ನು ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ