ಮುಂಬೈ: ಜಮ್ಮು-ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ 40 ಜನ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ದೊಡ್ಡ ವೈಫಲ್ಯ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು. ಪಾಕಿಸ್ತಾನ ಮತ್ತು ಜೈಶ್ ಎ ಮೊಹಮದ್ ಸಂಸ್ಥಾಪಕ ಮಸೂದ್ ಅಜರ್ ಮೇಲೂ ಕಿಡಿಕಾರಿದ ಅವರು ಜೆಇಎಂ ದಾಳಿಯ ಹೊಣೆ ಹೊತ್ತಿದೆ. ಪುಲ್ವಾಮಾ ದಾಳಿ ರಾಜಕೀಯ, ಅಧಿಕಾರಶಾಹಿ ಮತ್ತು ಬೇಹುಗಾರಿಕೆ ಪಡೆಯ ವೈಫಲ್ಯ ಎಂದರು.
ಇದೇ ವೇಳೆ ಉಗ್ರ ಮಸೂದ್ ಅಜರ್ ಮೌಲಾನಾ ಅಲ್ಲ, ಆತನೊಬ್ಬ ಸೈತಾನ. ದೇಶದ ವಿಷಯದಲ್ಲಿ ಭಾರತೀಯರಾದ ನಾವೆಲ್ಲರೂ ಒಂದು ಎಂಬುದನ್ನು ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ನೆರೆಯ ರಾಷ್ಟ್ರವು ಭಾರತೀಯ ಮುಸ್ಲಿಂರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ತಮಗಾಗಿ ಪ್ರತ್ಯೇಕ ರಾಷ್ಟ್ರವಾಗಿ ಪಾಕಿಸ್ತಾನವನ್ನು ಸ್ಥಾಪಿಸಿಕೊಟ್ಟ ಮೊಹಮದ್ ಅಲಿ ಜಿನ್ನಾ ಅವರನ್ನೇ ಅವರು ಇಂದು ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಒವೈಸಿ, ಉಭಯ ಪಕ್ಷಗಳು ಮತ್ತೆಂದಿಗೂ ಅಧಿಕಾರಕ್ಕೆ ಬರಲಾರವು ಎಂದರು.
Pulwama Terror Attack, Asaduddin Owaisi,JeM, Masood azer