ಪೈಂಟ್ ಕಾರ್ಖಾನೆಗೆ ಬೆಂಕಿ-ಸುತ್ತಮುತ್ತಲಿನ ಜನಗಳಿಗೆ ಜ್ವರಕೆಮ್ಮು

Fire Fierce Hot Flames Burning Orange Heat

ನೆಲಮಂಗಲ, ಫೆ.23- ಪೈಂಟ್ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ವಾಸಿಯಾಗದ ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಇದಕ್ಕೆ ಹೊಣೆಯಾರು? ಕೃಷಿ ಭೂಮಿಯಲ್ಲಿ ಕಾರ್ಖಾನೆ ತೆರೆಯಲು ಅನುಮತಿ ನೀಡಿದಗ್ರಾಮ ಪಂಚಾಯ್ತಿಯೇ ಅಥವಾ ಎಲ್ಲಾ ಗೊತ್ತಿದ್ದು ಕಣ್ಮುಚ್ಚಿ ಕುಳಿತ ಪೋಲೀಸ್ ಇಲಾಖೆಯೇ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ಮಾದನಾಯಕನ ಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಕುದುರುಗೆರೆ ಸಮೀಪವಿರುವ ಯುನೈಟೆಡ್ ಪೇಂಟ್ಸ್ ಹಾಗೂ ಫೈನ್ ಟೆಕ್ ಟೆಕ್ನಾಲಜೀಸ್ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ರಾಸಾಯನಿಕ ವಸ್ತುಗಳು ಸುಟ್ಟುಕರಕಲಾಗಿತ್ತು.

ಈ ಘಟನೆ ನಂತರ ಬೆಂಕಿಯ ಕೆನ್ನಾಲಿಗೆಯ ಸಿಕ್ಕ ರಾಸಾಯನಿಕ ವಸ್ತು ವಿಷವಾಗಿ ಪರಿವರ್ತನೆಗೊಂಡಿದ್ದು , ಸುತ್ತಮುತ್ತಲಿನ ಜನರ ಮೇಲೆ ದುಷ್ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಕೆಲವು ಗ್ರಾಮಸ್ಥರಿಗೆಜ್ವರ, ಕೆಮ್ಮು, ಸುಸ್ತು ಕಾಣಿಸಿಕೊಂಡಿದ್ದು ಔಷಧೋಪಚಾರ ಪಡೆದರೂ ಪ್ರಯೋಜನವಿಲ್ಲದಂತಾಗಿದೆ.

ಗ್ರಾಮಸ್ಥರ ಮೇಲೆ ದುಷ್ಪರಿಣಾಮ ಬೀರಿರುವುದಲ್ಲದೆ ಬೆಂಕಿಯಕೆನ್ನಾಲಿಗೆಗೆ ಸುಟ್ಟು ಹೋದ ಸಾವಿರಾರು ಬ್ಯಾರೆಲ್ ಕಚ್ಚಾ ತೈಲದಿಂದಉತ್ಪತ್ತಿಯಾಗಿರುವ ಬೂದಿ ಅಕ್ಕ ಪಕ್ಕದ ಕೃಷಿ ಜಮೀನನ್ನು ನಿಷ್ಪ್ರಯೋಜಕಜಮೀನಾಗಿ ಪರಿವರ್ತಿಸಿದೆ.

ಸುತ್ತಮುತ್ತಲ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿದೆ.ಜನರುಜ್ವರ, ಕೆಮ್ಮಿನಿಂದ ತತ್ತರಿಸಿ ಹೋಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಜತೆಗೆ ಮಾದನಾಯಕನ ಹಳ್ಳಿ ಪಲೀಸ್ ಠಾಣಾ ವ್ಯಾಪ್ತಿಯ ಸಿದ್ದನ ಹೊಸಹಳ್ಳಿ ಗ್ರಾಮದಲ್ಲಿಎರಡು ದಿನಗಳ ಹಿಂದೆ ರಿಲಯನ್ಸ್ ಜಿಯೋ ಟವರ್‍ಗಳಿಗೆ ಅಳವಡಿಸಲು ಶೇಖರಿಸಿಟ್ಟಿದ್ದ ಜನರೇಟರ್ ಗೋದಾಮಿಗೆ ಆಕಸ್ಮಿಕ ಬೆಂಕಿ ಬಿದ್ದಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಹೊಣೆಯಾರು: ಈ ಎರಡೂ ಘಟನೆಗಳಿಗೆ ಹೊಣೆಯಾರು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಮೇಲ್ನೋಟಕ್ಕೆ ಗ್ರಾಮ ಪಂಚಾಯ್ತಿ ಪೋಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಕಿ ಅನಾಹುತ ಸಂಭವಿಸಿದ ಕಾರ್ಖಾನೆಗಳಿರುವುದು ಕೃಷಿ ವಲಯದಲ್ಲಿ ಅಂತಹ ಪ್ರದೇಶದಲ್ಲಿ ಭೂ ಪರಿವರ್ತನೆ ಯಾಗದೆ ಕಾರ್ಖಾನೆ ನಡೆಸಲಾಗುತ್ತಿದ್ದರೂ ಸ್ಥಳೀಯ ಕಂದಾಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಏಕೆ ಎಂಬ ಅನುಮಾನ ಕಾಡುತ್ತಿದೆ.

ಭೂ ಪರಿವರ್ತನೆ ಯಾಗದ ಜಮೀನುಗಳಿಗೆ ಖಾತಾ, ಲೈಸೆನ್ಸ್ ಹಾಗೂ ಯಾವುದೇರೀತಿಯ ನಿರಾಕ್ಷೇಪಣ ಪತ್ರ ನೀಡಬಾರದೆಂಬ ಸ್ಪಷ್ಟ ನಿರ್ದೇಶನ ವಿದ್ದರೂ ಮಾದನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಯವರು ಕಾನೂನು ಉಲ್ಲಂಘಿಸಿರುವುದು ಸಾಬೀತಾಗಿದೆ.

ಬೆಂಕಿ ಅನಾಹುತ ಸಂಭವಿಸಿದ ಎರಡು ಘಟಕಗಳಲ್ಲಿ ಸರಿಯಾದ ಅಗ್ನಿಶಾಮಕ ವ್ಯವಸ್ಥೆ ಅಳವಡಿಸದಿರುವ ಬಗ್ಗೆ ಮಾದನಾಯಕನಹಳ್ಳಿ ಪೋಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದು ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎನ್ನಲಾಗಿದೆ.

ಬೀಗ ಜಡಿಯಿರಿ: ಅಗ್ನಿಅನಾಹುತ ಸಂಭವಿಸಿದ ಘಟಕಗಳಿರುವುದು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ. ಈ ಜಾಗದಲ್ಲಿ ಕೃಷಿ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಹೈಕೋರ್ಟ್ ಆದೇಶ ವಿದ್ದರೂ ನೂರಾರು ಅಕ್ರಮ ಕೈಗಾರಿಕೆಗಳು ಇಲ್ಲಿವೆ.ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕಾನೂನು ಬಾಹಿರವಾಗಿ ನಿರ್ಮಿಸಿರುವ ಘಟಕಗಳಿಗೆ ಬೀಗ ಜಡಿಯಲಿ ಎನ್ನುವುದು ಸಾರ್ವಜನಿಕಆಗ್ರಹವಾಗಿದೆ.

ಜನರರಕ್ಷಣೆಗಾಗಿಯೇ ರಚನೆಯಾದ ಕಂದಾಯ ಇಲಾಖೆ, ಗ್ರಾಮ ಪಂಚಾಯ್ತಿ ಹಾಗೂ ಪೋಲೀಸರ ದಿವ್ಯ ನಿರ್ಲಕ್ಷ್ಯ ದಿಂದ ಇಂದು ನೂರಾರು ಮಂದಿ ಜ್ವರ, ಕೆಮ್ಮಿನಿಂದ ನರಳುತ್ತಿದ್ದಾರೆ. ತಾವು ಬೆಳೆದ ಬೆಳೆ ನಾಶವಾಗಿ ರೈತ ಆಕಾಶಕ್ಕೆ ಮುಖ ಮಾಡಿ ಕುಳಿತಿದ್ದಾನೆ. ಇವರನ್ನು ರಕ್ಷಿಸುವವರುಯಾರು? ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ