ಪುಲ್ವಾಮದಲ್ಲಿನ ದೃಶ್ಯ ರಣಾಂಗಣಕ್ಕಿಂತ ಭಯಂಕರವಾಗಿತ್ತು: ಪ್ರತ್ಯಕ್ಷ ಸಾಕ್ಷಿಯಾದ ಯೋಧ ಎಂ.ಸಾದಿಕ್

ತುಮಕೂರು, ಫೆ.19- ಪುಲ್ವಾಮಾದಲ್ಲಿ ಉಗ್ರರ ದಾಳಿ ಪ್ರಕರಣ ಎದೆ ಝಲ್ಲೆನ್ನಿಸುತ್ತದೆ.ಅಲ್ಲಿನ ದೃಶ್ಯ ಹೇಳಲು ಅಸಾಧ್ಯ. ತುಮಕೂರು ನಗರದ ಯೋಧ ಕಣ್ಣಾರೆ ಕಂಡ ದೃಶ್ಯ ಬಗ್ಗೆ ಸವಿವರವಾಗಿ ಹೇಳುತ್ತ ರೋಚಕ ಕಹಾನಿ…

ಮೊನ್ನೆ ಪುಲ್ವಾಮಾದಲ್ಲಿ ನಡೆದ ಯೋಧರ ನರಮೇಧದ ಘಟನೆಯಿಂದ ಇಡೀ ದೇಶವೇ ತಲ್ಲಣಗೊಂಡಿತ್ತು.ಅಂತಹ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತುಮಕೂರಿನ ಯೋಧ ಅಲ್ಲಿನ ಘಟನೆ ಬಿಚ್ಚಿಟ್ಟು ಕಣ್ಣೀರು ಸುರಿಸಿದರು.

ಘಟನೆಯ ಪ್ರತ್ಯಕ್ಷ ಸಾಕ್ಷಿಯಾದ ಯೋಧ ಎಂ.ಸಾದಿಕ್ ಪತ್ರಿಕೆಯೊಂದಿಗೆ ಮಾತನಾಡಿ, ಅಂದಿನ ದುರ್ಘಟನೆ ನಡೆದ ಬಗ್ಗೆ ಮಾಹಿತಿ ವಿವರಿಸಿದರು.

ನಾನು ಪುಲ್ವಾಮಾದಿಂದ 12 ಕಿಲೋ ಮೀಟರ್ ದೂರದಲ್ಲಿದ್ದೆ.ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ದೃಶ್ಯ ರಣಾಂಗಣಕ್ಕಿಂತ ಭಯಂಕರವಾಗಿತ್ತು. ಎಲ್ಲಿ ನೋಡಿದರೂ ಮಾಂಸದ ತುಂಡುಗಳು, ಸುಟ್ಟು ಕರಕಲಾದ ವಾಹನಗಳು, ಹರಿದು ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆ, ಶೂ, ಬೆಲ್ಟ್, ಬ್ಯಾಡ್ಜ್ ಸೇರಿದಂತೆ ಇನ್ನಿತರೆ ವಸ್ತುಗಳು ಅಬ್ಬಬ್ಬಾ ಆ ದೃಶ್ಯ ಹೇಳಲು ಸಾಧ್ಯವಿಲ್ಲ ಎಂದು ಗದ್ಗದಿತರಾದರು.

ಮಿಲಿಟರಿಯವರಾದ ನಮಗೆ ಇಂತಹ ದೃಶ್ಯಗಳು ಸಾಮಾನ್ಯವಾಗಿರುತ್ತವೆ. ಜನಸಾಮಾನ್ಯರಿಗೆ ಭಯಂಕರವಾಗಿರುತ್ತವೆ. ಆದರೆ, ಮೊನ್ನೆ ನಡೆದ ಘಟನೆ ನಮಗೂ ಸಹ ತುಂಬಾ ಭಯಾನಕ ಹಾಗೂ ಘೋರವಾಗಿತ್ತು.ಯೋಧರ ದೇಹಗಳು ಛಿದ್ರ ಛಿದ್ರಗೊಂಡಿದ್ದನ್ನು ನೋಡಿ ಕರುಳು ಕಿತ್ತುಬರುತ್ತಿತ್ತು, ಅಷ್ಟೇ ಆಕ್ರೋಶವೂ ವ್ಯಕ್ತವಾಗುತ್ತಿತ್ತು.

ಮಂಡ್ಯದ ಹುತಾತ್ಮ ಯೋಧ ಗುರು ಅವರ ಪರಿಚಯ ನನಗಿರಲಿಲ್ಲ. ಅವರದ್ದು ಬೇರೆ ಯುನಿಟ್ ಆಗಿತ್ತು. ಆತ್ಮಾಹುತಿ ಮಾಡಿಕೊಂಡ ಉಗ್ರ ಆದಿಲ್ ಅಹಮ್ಮದ್ ವಾಸವಿದ್ದ ಸ್ಥಳ ಕೂಡ ನೋಡಿದ್ದೇನೆ. ಆತ ಕಾಶ್ಮೀರದ ವಾಸಿ. ಕಾಶ್ಮೀರದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಹೆಚ್ಚಿದೆ.ಅವರೊಂದಿಗೆ ನಾವು ನಿತ್ಯ ಹೆಣಗಾಟ ನಡೆಸುತ್ತೇವೆ. ಉಗ್ರರಿಂದಾಗಿ ಕಾಶ್ಮೀರದಲ್ಲಿ ಭಯೋತ್ಪಾದನಾ ವಾತಾವರಣ ನಿರ್ಮಾಣವಾಗಿದೆ.

ಸರ್ಕಾರ ಆದೇಶ ಹೊರಡಿಸಿದರೆ ನಮ್ಮ ಸಹೋದ್ಯೋಗಿಗಳನ್ನು ಕೊಂದವರನ್ನು ಮುಗಿಸುತ್ತೇವೆ. ಆ ದಿನವನ್ನೇ ಎದುರು ನೋಡುತ್ತಿದ್ದೇವೆ ಎಂದು ತಮ್ಮ ಆಕ್ರೋಶಭರಿತ ಮಾತುಗಳನ್ನು ಆಡಿದರು.

ರಜೆ ನಿಮಿತ್ತ ತುಮಕೂರಿಗೆ ಬಂದ ಸಾದಿಕ್ ಅವರು ಗಡಿಯಲ್ಲಿ ಐದಕ್ಕೂ ಹೆಚ್ಚು ಮಂದಿ ಉಗ್ರಗಾಮಿಗಳನ್ನು ಹತ್ಯೆಗೈದಿದ್ದು, ಇವರನ್ನು ಸೇನೆ ಗೌರವಿಸಿದೆ. ಇವರಿಗೆ ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿ ಕೂಡ ಸಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ