ಇಸ್ಲಮಾಬಾದ್: ಪುಲ್ವಾಮಾ ಉಗ್ರರ ದಾಳಿಯ ಬಗ್ಗೆ ಭಾರತ ನಿರಾಧಾರವಾಗಿ ಪಾಕಿಸ್ತಾನದ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ಯುದ್ಧಗಳನ್ನು ಆರಂಭಿಸುವುದು ಸುಲಭ, ಆದರೆ ನಿಲ್ಲಿಸುವುದು ಕಷ್ಟ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಪಾಕ್ ರೆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್, ಯಾವುದೇ ಸಾಕ್ಷಿಗಳಿಲ್ಲದೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ವಿಚಾರದಲ್ಲಿ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಪುಲ್ವಾಮಾ ದಾಳಿ ಹಿಂದೆ ಪಾಕ್ ಕೈವಾಡವಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ಉಗ್ರರ ದಾಳಿ ಕುರಿತು ಪಾಕ್ ವಿರುದ್ಧ ಯಾವುದೇ ಸಾಕ್ಷಿಗಳನ್ನು ಭಾರತ ನೀಡಿದ್ದೇ ಆದಲ್ಲಿ, ನಾವು ಖಂಡಿತವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ನೆಲದಿಂದ ಯಾರೂ ಅಶಾಂತಿಯನ್ನು ಹರಡಬಾರದೆಂಬುದು ನಮ್ಮ ಉದ್ದೇಶವಗೈದೆ ಎಂದು ಹೇಳಿದರು.
ನೀವು ನಮ್ಮ ಮೇಲೆ ಆಕ್ರಮಣ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ನಾವು ಪ್ರತೀಕಾರ ತೀರಿಸಿಕೊಳ್ಳಲು ಚಿಂತಿಸುವುದಿಲ್ಲ. ಬದಲಾಗಿ ಪ್ರತೀಕಾರ ಪಡೆಯುತ್ತೇವೆ ಎಂದು ಇಮ್ರಾನ್ ತಿಳಿಸಿದ್ದಾರೆ.
ಒಂದು ಯುದ್ಧ ಆರಂಭವಾಗುವುದು ಮಾನವನ ಕೈಯಲ್ಲಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅದು ಎಲ್ಲಿ ಮುಕ್ತಾಯವಾಗುತ್ತದೆ ಎಂಬುದು ದೇವರಿಗೆ ಮಾತ್ರ ಗೊತ್ತಿರುತ್ತದೆ. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಮಾತ್ರವೇ ಬಗೆಹರಿಸಬೇಕಿದೆ ಎಂದು ಹೇಳಿದ್ದಾರೆ.
ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ರಜೆ ಮುಗಿಸಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿರಿಸಿಕೊಂಡು ಪಾಕ್ ಪ್ರಾಯೋಜಿತ ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ ಸೇನೆಯ 40 ಯೋಧರು ಹುತಾತ್ಮರಾಗಿದ್ದರು.
Pak Will Retaliate If India Attacks”: Imran Khan Amid Tension Over Pulwama