ಬೆಂಗಳೂರು, ಫೆ.18- ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ, ಆರ್ಥಿಕ ಭದ್ರತೆಗೆ ಮಹಾಲಕ್ಷ್ಮಿ ಯೋಜನೆ, ಕತ್ತಲಿನಿಂದ ಬೆಳಕಿನೆಡೆಗೆ ರೋಶಿನಿ ಯೋಜನೆ, ಸ್ವಯಂ ಉದ್ಯೋಗ ಹೊಂದಲು ಮಹಿಳೆಯರಿಗೆ ಸಂಚಾರಿ ಕ್ಯಾಂಟಿನ್ ವಾಹನಗಳ ಅನ್ನಪೂರ್ಣೇಶ್ವರಿ ಯೋಜನೆ ಸೇರಿದಂತೆ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡುವ ಹಲವು ಮಹತ್ವದ ಯೋಜನೆಗಳನ್ನು ಇಂದು ಬಿಬಿಎಂಪಿ ಮೈತ್ರಿ ಆಡಳಿತದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮೊದಲ ಮಹಿಳಾ ಅಧ್ಯಕ್ಷರಾದ ಹೇಮಲತಾ ಗೋಪಾಲಯ್ಯ ಅವರು ಮಹಿಳೆಯರ ಮನಗೆಲ್ಲುವ ಪಿಂಕ್ ಬಜೆಟ್ ಮಂಡಿಸಿದರು.
3500 ಕೋಟಿ ತೆರಿಗೆ ಸಂಗ್ರಹದ ಗುರಿ, ಸುಮಾರು ನೂರು ಕೋಟಿಯಷ್ಟು ಬಾಕಿ ತೆರಿಗೆ ವಸೂಲಿ, ವಿದ್ಯಾಸಂಸ್ಥೆಗಳಿಗೆ ಪೂರ್ಣ ಪ್ರಮಾಣದ ತೆರಿಗೆ, ತುಮಕೂರು ರಸ್ತೆಯಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನೊಳಗೊಂಡ 10,691.82 ಕೋಟಿ ಮೊತ್ತದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2019-20ನೆ ಸಾಲಿನ ಬಜೆಟ್ ಮಂಡಿಸಿದ್ದು, ಪ್ರತಿಯೂ ಪಿಂಕ್ ಬಣ್ಣದ್ದಾಗಿದ್ದು ವಿಶೇಷವಾಗಿತ್ತು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಒಟ್ಟು ಆದಾಯ 10,691.82 ಕೋಟಿ.ಒಟ್ಟು ವೆಚ್ಚ 10,688.63 ಕೋಟಿಗಳಾಗಿದ್ದು, 3.19 ಕೋಟಿಯ ಉಳಿತಾಯದ ಬಜೆಟ್ ಇದಾಗಿದೆ.
ಸಂಪನ್ಮೂಲ ಕ್ರೋಢೀಕರಣಕ್ಕೆ ಹಲವು ಸುಧಾರಣಾ ಕ್ರಮಗಳನ್ನು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಘೋಷಿಸಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಸುಮಾರು 3500 ಕೋಟಿ ರೂ.ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ.
ಅದೇ ರೀತಿ ನೂರು ಕೋಟಿ ರೂ.ಗಳಷ್ಟು ಬಾಕಿ ಇರುವ ತೆರಿಗೆ ಪಾವತಿ ವಸೂಲಿ ನಿರೀಕ್ಷೆ ಮಾಡಲಾಗಿದೆ. ಇತರೆ ವಿದ್ಯಾಸಂಸ್ಥೆಗಳಿಗೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ನಿಗದಿ ಮಾಡಲಾಗಿದೆ.ಸಂಪನ್ಮೂಲಗಳನ್ನು ಹೆಚ್ಚಿಸಲು ಕಂದಾಯ ಜಾಗೃತ ದಳಗಳನ್ನು ಸ್ಥಾಪನೆ ಮಾಡಲು ನಿರ್ಧ ರಿಸಲಾಗಿದೆ.
ಖಾತಾ ದಾಖಲೆಗಳ ಲೆಕ್ಕ ಪರಿಶೋಧನೆ, ಆಸ್ತಿ ತೆರಿಗೆ ಬಾಕಿ ವಸೂಲಿಗೆ ವಸೂಲಾತಿ ಆಂದೋಲನ, 100 ಕಟ್ಟಡಗಳಿಗೆ ಟೋಟಲ್ ಸ್ಟೇಷನ್ ಸರ್ವೆ, 400 ಕೋಟಿ ಬಾಕಿ ಸುಧಾರಣಾ ಶುಲ್ಕ ವಸೂಲಿ ಮಾಡುವ ಗುರಿ ಹೊಂದಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡಗಳ ಮೇಲೆ ಸೇವಾಶುಲ್ಕ 75 ಕೋಟಿ ರೂ.ಆದಾಯ ನಿರೀಕ್ಷೆ ಮಾಡಲಾಗಿದೆ.ಒಎಫ್ಸಿ ಕೇಬಲ್ ಶುಲ್ಕ 175 ಕೋಟಿ, ಮೊಬೈಲ್ ಟವರ್ನಿಂದ 50 ಕೋಟಿ, ಕೇಂದ್ರ ಸರ್ಕಾರದ ಅನುದಾನ 405.76 ಕೋಟಿ, ರಾಜ್ಯ ಸರ್ಕಾರದ ಅನುದಾನ 3200.35 ಕೋಟಿ ಬಜೆಟ್ ಒಳಗೊಂಡಿದೆ ಎಂದು ಹೇಮಲತಾ ಅವರು ತಿಳಿಸಿದರು.
ಕಲ್ಯಾಣ ಕಾರ್ಯಕ್ರಮಗಳಿಗೆ ಶೇ.24.10 ಅನುದಾನದಲ್ಲಿ ಒಟ್ಟಾರೆ 645.97 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಪ್ರತಿ ವಾರ್ಡ್ಗೆ 10 ಒಂಟಿ ಮನೆಗಳ ನಿರ್ಮಾಣಕ್ಕಾಗಿ 100 ಕೋಟಿ ರೂ.ಗಳ ಮೀಸಲು, ಎಸ್ಸಿ/ಎಸ್ಟಿ ಪ್ರದೇಶಗಳಲ್ಲಿ ಅಭಿವೃದ್ಧಿಗಾಗಿ 60 ಕೋಟಿ ರೂ., ಹಿಂದುಳಿದ ಅಲ್ಪ ಸಂಖ್ಯಾತರ ಮನೆಗಳ ನಿರ್ಮಾಣಕ್ಕೆ ಪ್ರತಿ ವಾರ್ಡ್ಗೆ 5ರಂತೆ 50 ಕೋಟಿ ರೂ. ಮೀಸಲಿಡಲಾಗಿದೆ.
ಸ್ವಯಂ ಉದ್ಯೋಗ: ಸ್ವಯಂ ಉದ್ಯೋಗ ಹೊಂದಲು ಸಂಚಾರಿ ಕ್ಯಾಂಟಿನ್ ಸೌಲಭ್ಯವನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕು ವಾಹನದಂತೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ನೀಡಲು 5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಆರ್ಥಿಕ ಸ್ವಾವಲಂಬನೆ: ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸ್ವಾವಲಂಬನೆ ಹೊಂದಲು ತಳ್ಳುಗಾಡಿಗಳನ್ನು ನೀಡಲು 4 ಕೋಟಿ, ದಿವ್ಯಾಂಗ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ 75 ಕೋಟಿ ರೂ. ಮೀಸಲಿಡಲಾಗಿದೆ.ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ದಿವ್ಯಾಂಗ ಚೇತನರು ಮತ್ತು ಮಂಗಳಮುಖಿಯರ ಕಲ್ಯಾಣಕ್ಕೆ 1 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಹೇಳಿದರು.
ಪ್ರತಿ ವಾರ್ಡ್ಗೆ 50 ಬೈಸಿಕಲ್ ವಿತರಣೆಗೆ 40 ಕೋಟಿ, 50 ಟೈಲರಿಂಗ್ ಯಂತ್ರಗಳ ವಿತರಣೆಗೆ 8 ಕೋಟಿ, ಹಿರಿಯರ ನಾಗರಿಕರ ಕಲ್ಯಾಣಕ್ಕೆ 5 ಕೋಟಿ, ಪ್ರತಿಭಾನ್ವಿತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ 1.50 ಕೋಟಿ, ಪಾಲಿಕೆ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಬಸ್ಪಾಸ್ಗಾಗಿ 1 ಕೋಟಿ ರೂ. ಅನುದಾನ ನೀಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೂ ಬಿಸಿಯೂಟ: ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಒಂದು ಕೋಟಿ ರೂ. ಮೀಸಲಿಡಲಾಗಿದೆ.
ಪಾಲಿಕೆಯ ಶಾಲಾ-ಕಾಲೇಜುಗಳ ದುರಸ್ತಿ, ಮೂಲಭೂತ ಸೌಕರ್ಯಕ್ಕಾಗಿ 25 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಮಹಾಲಕ್ಷ್ಮಿ ಯೋಜನೆ: ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ 01.04.2019 ರಿಂದ 31.03.2020ರ ವರೆಗೆ ಜನಿಸಿದ ಹೆಣ್ಣು ಮಗುವಿಗೆ 1 ಲಕ್ಷ ರೂ. ಬಾಂಡ್ ವಿತರಣೆ, ಆರೋಗ್ಯ ಕವಚ ಸಂಚಾರಿ ಬಸ್ ಖರೀದಿಗೆ 3 ಕೋಟಿ, ಎರಡು ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆಗೆ 25 ಕೋಟಿ, ಬೈಕ್, ಆ್ಯಂಬುಲೆನ್ಸ್ ಖರೀದಿಗೆ 2 ಕೋಟಿ, ಕಿದ್ವಾಯಿ ಆಸ್ಪತ್ರೆ, ಪಾಲಿಕೆಯ ಧರ್ಮಶಾಲೆ ನವೀಕರಣಕ್ಕೆ 5 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಎಸ್ಬಿಎಸ್, ರಾಜೀವ್ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಧರ್ಮಶಾಲೆ ನಿರ್ಮಿಸಲು 5 ಕೋಟಿ, ದುಶ್ಚಟ ನಿವಾರಣಾ ಕೇಂದ್ರ ಪ್ರಾರಂಭಕ್ಕೆ 2 ಕೋಟಿ ಮೀಸಲಿರಿಸಲಾಗಿದೆ.
ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ: ತುಮಕೂರು ರಸ್ತೆಯಲ್ಲಿ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಸ್ಥಾಪನೆಗೆ 5 ಕೋಟಿ, ಶ್ರೀಗಳ ಹೆಸರಲ್ಲಿ ಸಮಾಜ ಸೇವೆಯಲ್ಲಿ ಶಿಕ್ಷಣಕ್ಕಾಗಿ ಉನ್ನತ ಮಟ್ಟದಲ್ಲಿ ಸೇವೆ ಒದಗಿಸುತ್ತಿರುವ ಶಿಕ್ಷಣ ಸಂಸ್ಥೆ ಹಾಗೂ ಸಂಘಗಳಿಗೆ ನಗದು ಪ್ರಶಸ್ತಿ ನೀಡಿ ಗೌರವಿಸಲು 25 ಲಕ್ಷ ರೂ. ಮೀಸಲು.
ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿ: ಕಾರ್ಡ್ರೋಡ್ ರಸ್ತೆಯಿಂದ ಕುರುಬರಹಳ್ಳಿ ಮೂಲಕ ರಿಂಗ್ರಸ್ತೆಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ಗೆ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಹಾಗೂ ಅವರ ಕಂಚಿನ ಪುತ್ಥಳಿ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ.
ಬಿಬಿಎಂಪಿ ಬೆಳಕು: ಪಾಲಿಕೆಯ ಎಲ್ಲ ಕಾರ್ಯಕ್ರಮಗಳನ್ನು ಪಸರಿಸಲು ಬಿಬಿಎಂಪಿ ಬೆಳಕು ಎಂಬ ಮಾಸಿಕ ಪತ್ರಿಕೆ ಪ್ರಾರಂಭಿಸಲು ನಿರ್ಧಾರ. ನಗರದ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ವಿವಿಧ ನಿರ್ವಹಣಾ ಘಟಕಗಳ ಅಭಿವೃದ್ಧಿಗೆ 110 ಕೋಟಿ ರೂ.ಗಳ ಅನುದಾನ, ಆಸ್ತಿ ಮತ್ತು ಸ್ವತ್ತುಗಳ ನಿರ್ವಹಣೆ, ಭೂ ಪರಿಹಾರ ನೀಡುವ ಸಲುವಾಗಿ 50 ಕೋಟಿ, ಪಾಲಿಕೆ ಒಡೆತನದ ಆಸ್ತಿಗಳ ಲೆಕ್ಕ ಪರಿಶೋಧನೆ ಮತ್ತು ಮೌಲ್ಯಮಾಪನಕ್ಕೆ 5 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಪಾರ್ಕ್ಗಳ ನಿರ್ವಹಣೆಗೆ 34 ಕೋಟಿ, ಹಸಿರು ಬೆಂಗಳೂರು ನಿರ್ಮಾಣಕ್ಕೆ 10 ಲಕ್ಷ ಗಿಡಗಳನ್ನು ನೆಡಲು 3 ಕೋಟಿ, ಕೆರೆಗಳ ನಿರ್ವಹಣೆಗೆ 25 ಕೋಟಿ ಅನುದಾನ ನೀಡಲಾಗಿದೆ.
ಪ್ರತಿ ವಾರ್ಡ್ಗೆ 3 ಕೋಟಿ: ವಾರ್ಡ್ಗಳ ನಿರ್ವಹಣಾ ಕಾಮಗಾರಿಗಳಿಗೆ ಹೊಸ ವಲಯದ ವಾರ್ಡ್ಗೆ 3 ಕೋಟಿ ಹಳೆ ವಲಯದ ವಾರ್ಡ್ಗಳಿಗೆ 2 ಕೋಟಿಯಂತೆ ಒಟ್ಟಾರೆ 465 ಕೋಟಿ ಮೀಸಲಿರಿಸಿದೆ.
ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ 19.5 ಕೋಟಿ, ಹೊಸ ರುದ್ರಭೂಮಿ ನಿರ್ಮಿಸಲು 40 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ 79 ಕೋಟಿ ಮೀಸಲಿರಿಸಲಾಗಿದೆ.
ಐಟಿ ಹಬ್: ಪಾಲಿಕೆ ವ್ಯಾಪ್ತಿಯ ಐಟಿ ಹಬ್ನಲ್ಲಿ 125 ಕೋಟಿ ವೆಚ್ಚದಲ್ಲಿ ಐಟಿ-ಬಿಟಿ ಕಾರಿಡಾರ್ನ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನೆ ತಯಾರಿಸಲು 3 ಕೋಟಿ ಮೀಸಲಿರಿಸಿದೆ. ರಾಜಕಾಲುವೆಗಳ ಸ್ವಚ್ಛತೆ ಮತ್ತು ನಿರ್ವಹಣೆಗೆ 25 ಕೋಟಿ ಮೀಸಲಿರಿಸಲಾಗಿದೆ.
ರಸ್ತೆ ಗುಂಡಿ ಮುಚ್ಚಲು ರಸ್ತೆ ಮಾರ್ಕಿಂಗ್ ರಿಫ್ಲೆಕ್ಟರ್ ಅಳವಡಿಕೆ, ಮೇಲ್ಸೇತುವೆ, ಕೆಳಸೇತುವೆಗಳ ದುರಸ್ತಿ ವಾರ್ಷಿಕ ನಿರ್ವಹಣೆಗೆ 192 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.
ಬೃಹತ್ ಯೋಜನೆಗಳ ಕಾಮಗಾರಿಗೆ ಸಂಬಂಧಪಟ್ಟಂತೆ ನವಬೆಂಗಳೂರು ಯೋಜನೆಯಡಿ 8015 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 2300 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ವೈಟ್ ಟ್ಯಾಪಿಂಗ್ 1172 ಕೋಟಿ, ಕೆರೆಗಳ ಅಭಿವೃದ್ಧಿ 348 ಕೋಟಿ, ರಸ್ತೆಗಳ ಅಭಿವೃದ್ಧಿ 2246.68 ಕೋಟಿ, ಗ್ರೇಡ್ ಸಪರೇಟರ್ಗಳ ನಿರ್ಮಾಣಕ್ಕೆ 534.60 ಕೋಟಿ, ಬೃಹತ್ ಮಳೆ ನೀರ್ಗಾಲುವೆ ಅಭಿವೃದ್ಧಿಗೆ 1321.14 ಕೋಟಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ 75 ಕೋಟಿ, 110 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ 275 ಕೋಟಿ, ಐಟಿಪಿಎಲ್ಗೆ ಸಂಪರ್ಕಿಸುವ 14 ರಸ್ತೆಗಳ ಅಭಿವೃದ್ಧಿಗೆ 80 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 753 ಕೋಟಿ, ಕಟ್ಟಡಗಳು ಮತ್ತು ಆಸ್ಪತ್ರೆಗಳಿಗೆ 247.95 ಕೋಟಿ, ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗಿದೆ.
ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ನೀತಿ 10 ಸಾವಿರ ವಾಹನ ನಿಲುಗಡೆಗೆ 87 ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಬ್ಬಾಳ ಮತ್ತು ಕೆಆರ್ ಪುರಂ ಫ್ಲೈ ಓವರ್ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ, ಗೊರಗುಂಟೆ ಪಾಳ್ಯ ಹೊಸ ಅಂಡರ್ಪಾಸ್ ನಿರ್ಮಾಣಕ್ಕೆ 185 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಮಲತಾ ಗೋಪಾಲಯ್ಯ ಅವರು ಹೇಳಿದರು.
ಪ್ರಸ್ತುತ ಬಜೆಟ್ಅನ್ನು ಆಡಳಿತಾರೂಢ ಮೈತ್ರಿ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರೆ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.