ಫೆ.22ರಿಂದ ಮಾ.19ರವರೆಗೆ ರಾಜ್ಯದಲ್ಲಿ ಪ್ರಧಾನಿ ಮೋದಿ ಸಮಾವೇಶ

ಬೆಂಗಳೂರು, ಫೆ.18- ಇದೇ 22ರಿಂದ ಮಾ.19ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ವಿವಿಧೆಡೆ ಕಾರ್ಯಕರ್ತರ ಸಮಾವೇಶ ಹಾಗೂ ಬಹಿರಂಗ ಸಮಾವೇಶ ನಡೆಸುವ ಮೂಲಕ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.

ನಮ್ಮ ಪರಿವಾರ, ಬಿಜೆಪಿ ಪರಿವಾರ, ಮೋದಿ ವಿಜಯ ಸಂಕಲ್ಪ ಯಾತ್ರೆ, ಕಾರ್ಯಕರ್ತರೊಂದಿಗೆ ಸಮಾವೇಶ, ಸಂವಾದ ಸೇರಿದಂತೆ ನಾನಾ ರೀತಿಯ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇದೇ 22ರಿಂದ ಮಾ19ರವರೆಗೆ ಮೊದಲ ಸುತ್ತಿನ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಯನ್ನು ಪೂರ್ಣಗೊಳಿಸಲಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್.ಯಡಿಯೂರಪ್ಪ, ಮೋದಿ ಸಂಕಲ್ಪಯಾತ್ರೆ ಹಾಗೂ ನನ್ನ ಪರಿವಾರ, ಬಿಜೆಪಿ ಪರಿವಾರ ಕಾರ್ಯಕ್ರಮದ ವಿವರಗಳನ್ನು ಮಾಧ್ಯಮದವರಿಗೆ ನೀಡಿದರು.

ಇದೇ 21ರಂದು ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರಗಳ ಬೃಹತ್ ಕಾರ್ಯಕ್ರಮ ದೇವನಹಳ್ಳಿಯಲ್ಲಿ ನಡೆಯಲಿದ್ದು, ಅಂದಿನ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳುವರು.

ಫೆ.22ರಂದು ಬೀದರ್ ಜಿಲ್ಲೆಯ ಹುಮನಾಬಾದ್‍ನಲ್ಲಿ ಬೆಳಗ್ಗೆ 11 ಗಂಟೆಗೆ ಕಲಬುರ್ಗಿ ಮತ್ತು ಬೀದರ್ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಯಲಿದ್ದು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ್ ಭಾಗವಹಿಸುವರು.ಸಂಜೆ 4 ಗಂಟೆಗೆ ಯಾದಗಿರಿಯಲ್ಲಿ ಮೋದಿ ವಿಜಯ ಸಂಕಲ್ಪಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಫೆ. 23ರಂದು ವಿಜಯಪುರ, ಬಾಗಲಗುಂಟೆ ಲೋಕಸಭೆ ಕ್ಷೇತ್ರಗಳ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆದರೆ, 25ರಂದು ಗದಗದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ, 28ರಂದು ರಾಯಚೂರಿನಲ್ಲಿ ಸಂಕಲ್ಪ ಯಾತ್ರೆ ಹಾಗೂ ಮಾ.1ರಂದು ಕಲಬುರ್ಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ.

ಮಾ.2ರಂದು ತುಮಕೂರಿನಲ್ಲಿ ವಿಜಯ ಸಂಕಲ್ಪಯಾತ್ರೆ, 3ರಂದು ಚಿತ್ರದುರ್ಗ, ದಾವಣಗೆರೆ, 4ರಂದು ಹಾವೇರಿ, ಉತ್ತರ ಕನ್ನಡ, 5ರಂದು ಚಿಕ್ಕೋಡಿ, ಬೆಳಗಾವಿ, 6ರಂದು ಧಾರವಾಡ, 7 ಕೊಪ್ಪಳ, ಬಳ್ಳಾರಿ, 8ರಂದು ಬೆಂಗಳೂರು ಉತ್ತರ, 9 ಬೆಂಗಳೂರು ಕೇಂದ್ರ, 10 ಬೆಂಗಳೂರು ದಕ್ಷಿಣ, 11 ಬೆಂಗಳೂರು ಗ್ರಾಮಾಂತರ, 12ರಂದು ಕೋಲಾರ, 13 ಶಿವಮೊಗ್ಗ, 14 ಉಡುಪಿ, 15ರಂದು ಮಂಗಳೂರಿನಲ್ಲಿ , 16 ಕೊಡಗು, 17 ಚಾಮರಾಜನಗರ ಮತ್ತು ಮೈಸೂರು, 18ರಂದು ಮಂಡ್ಯ, ಹಾಸನ ಹಾಗೂ ಮಾ.19ಕ್ಕೆ ಚಿಕ್ಕಮಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ.

ಪ್ರತಿ ಬೂತ್‍ನಲ್ಲೂ 25 ಮನೆಗಳ ಸಂಪರ್ಕ ಮತ್ತು ಧ್ವಜಾರೋಹಣ ನಡೆಯಲಿದೆ.ಶಾಸಕರು, ಸಂಸದರು, ಜಿಪಂ, ತಾಪಂ, ನಗರಸಭೆ, ಪಟ್ಟಣ ಪಂಚಾಯ್ತಿ, ಗ್ರಾಪಂ ಸದಸ್ಯರು ನಾಳೆಯಿಂದ ಎರಡು ದಿನಗಳ ಕಾಲ 25 ಮನೆಗಳ ಸಂಪರ್ಕ ಅಭಿಯಾನ ನಡೆಸಿ ಮನೆಗಳ ಮೇಲೆ ಪಕ್ಷದ ಧ್ವಜಾರೋಹಣ ಮತ್ತು ಕರಪತ್ರ ವಿತರಣೆ ಮಾಡಲಿದ್ದಾರೆ.

ಫೆ.24ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 75 ಲಕ್ಷ ಮನೆಗಳನ್ನು ಸಂಪರ್ಕಿಸಿ ಪಕ್ಷದ ಧ್ವಜಾರೋಹಣ, ಕರಪತ್ರ ಹಂಚಿಕೆ, ಸ್ಟಿಕ್ಕರ್ ವಿತರಣೆ ಮಾಡಲಿದ್ದಾರೆ ಎಂದರು.

ಫೆ.26ರಂದು ಕೇಂದ್ರ ಸರ್ಕಾರದ ಫಲಾನುಭವಿಗಳು ಮತ್ತು ಪಕ್ಷದ ಕಾರ್ಯಕರ್ತರು ಪ್ರತಿ ಬೂತ್‍ನಲ್ಲಿ ಒಂದು ಕಡೆ ಸೇರಿ ಕಮಲ ಜ್ಯೋತಿ ಸಂಕಲ್ಪ ದೀಪೋತ್ಸವ ಆಚರಿಸಲಿದ್ದಾರೆ.ಅಂದು ಸಂಜೆ 7ಗಂಟೆಗೆ ಒಂದೇ ಸಮಯದಲ್ಲಿ ರಾಜ್ಯದ ಎಲ್ಲಾ ಬೂತ್‍ಗಳಲ್ಲಿ ರಂಗೋಲಿ ಹಾಕಿ ಕಮಲ ದೀಪ ಹಚ್ಚಲಿದ್ದು, ಸುಮಾರು 8ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದ ಬೂತ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.ರಾಜ್ಯದ 224ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಸಾವಿರ ಕಾರ್ಯಕರ್ತರು ಈ ಸಮಾವೇಶವನ್ನು ಆಯೋಜಿಸಿದ್ದಾರೆ. ಎರಡೂವರೆ ಲಕ್ಷ ಕಾರ್ಯಕರ್ತರು ಪ್ರಧಾನಿ ಅವರೊಂದಿಗೆ ಸಂವಾದ ನಡೆಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಿಎಸ್‍ವೈ ಮನವಿ ಮಾಡಿದರು.

ಮಾ.2ರಂದು ದೇಶಾದ್ಯಂತ ಕಾರ್ಯಕರ್ತರು ಮೂರು ಕೋಟಿ ಬೈಕ್‍ಗಳಲ್ಲಿ ಪಕ್ಷದ ಧ್ವಜವನ್ನು ಕಟ್ಟಿ ಬೈಕ್ ರ್ಯಾಲಿ ನಡೆಸಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ 150 ಕಿ.ಮೀ. ನಗರದ ಭಾಗದಲ್ಲಿ 30ರಿಂದ 60 ಕಿ.ಮೀ. ದೂರ ಬೈಕ್ ರ್ಯಾಲಿ ನಡೆಸಲಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕನಿಷ್ಟ ಒಂದು ಸಾವಿರ ಬೈಕ್‍ಗಳು ಇದರಲ್ಲಿ ಭಾಗವಹಿಸಲಿವೆ.

ಪರಿಣಾಮ ಬೀರಲ್ಲ:
ಇತ್ತೀಚಿಗೆ ನಡೆದ ಕೆಲವು ಘಟನೆಗಳು ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನಾವು ಕನಿಷ್ಠ 22 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಕೇಂದ್ರ ಸರ್ಕಾರದ ಸಾಧನೆಗಳು ಪಕ್ಷವನ್ನು ಗೆಲ್ಲಿಸುವುದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ