ರಾಜ್ಯದ ಆಯ್ದ 9 ಜಿಲ್ಲೆಗಳಲ್ಲಿ ಕೈಗಾರಿಕ ಕ್ಲಸ್ಟರ್ ಸ್ಥಾಪನೆ: ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.18-ರಾಜ್ಯದ ಆಯ್ದ 9 ಜಿಲ್ಲೆಗಳಲ್ಲಿ ಅಲ್ಲಿನ ವೈವಿಧ್ಯತೆಗಳಿಗನುಗುಣವಾಗಿ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಚೀನಾ ಮಾದರಿ ಕೈಗಾರಿಕಾ ಕ್ಲಸ್ಟರ್‍ಗಳ ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಟಾಯ್ಸ್ ಕ್ಲಸ್ಟರ್, ಬಳ್ಳಾರಿ ಜವಳಿ ಕ್ಲಸ್ಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯವಿರುವ ಪ್ರೋತ್ಸಾಹ ಹಾಗೂ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಪ್ರೋತ್ಸಾಹ ನೀಡಲಿದೆ, ರಾಜ್ಯ ಹೂಡಿಕೆ ಸ್ನೇಹಿಯಾಗಿದೆ ಎಂದು ಹೇಳಿದರು.

ವಿಶ್ವದರ್ಜೆಯ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ ಮಾಡುವ ಉದ್ದೇಶವಿದ್ದು ಇದರ ಮೊದಲ ಭಾಗವಾಗಿ 2 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‍ಗೆ ಚಾಲನೆ ನೀಡಲಾಗಿದೆ ಎಂದರು. ರಾಜ್ಯದ ಅಭಿವೃದ್ಧಿ ದರ ಶೇ.10ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಹೇಳಿದರು.

ಆರ್ಥಿಕ ಸುಧಾರಣೆಗೂ ಒತ್ತು ನೀಡುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಆದ್ಯತೆ ಮತ್ತು ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಸೃಷ್ಟಿಸಲು ಕೈಗಾರಿಕೆ ಬೆಳವಣಿಗೆಯ ಮಹತ್ವ ಅರಿತಿದ್ದು, ಅದಕ್ಕೆ ಪೂರಕವಾದ ಕೈಗಾರಿಕೆ ಹಾಗೂ ಹೂಡಿಕೆ ಸ್ನೇಹಿ ಪರಿಸರ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.

ರಾಜ್ಯದಲ್ಲಿ 7940 ಕಿ.ಮೀ. ರಸ್ತೆ-ಸೇತುವೆ ನಿರ್ಮಾಣ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒತ್ತು ನೀಡಲಾಗಿದೆ. ಸಿಲಿಕಾನ್ ವ್ಯಾಲಿಯಾಗಿರುವ ಬೆಂಗಳೂರಿನಲ್ಲಿ ಹೊಸ ಅನ್ವೇಷಣೆಗಳಿಗೂ ಆದ್ಯತೆ ದೊರೆಯುತ್ತಿದೆ.400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ ಎಂದರು.

ಬಳ್ಳಾರಿ, ಮೈಸೂರು, ಚಿತ್ರದುರ್ಗ, ಕಲಬುರಗಿಗಳಲ್ಲಿ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ತಲಾ 5 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 9 ಕೈಗಾರಿಕಾ ಕ್ಲಸ್ಟರ್‍ಗಳಿಂದ 1.5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಮೈತ್ರಿ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಉದ್ಯೋಗ ಮತ್ತು ಆರ್ಥಿಕಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಕೈಗಾರಿಕಾ ಬೆಳವಣಿಗೆ ಶೇ.17ರಷ್ಟಿದ್ದು, ನವೋದ್ಯಮದಲ್ಲಿ ಜಾಗತಿಕವಾಗಿ ರಾಜ್ಯ 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 8000 ನವೋದ್ಯಮ ಸ್ಥಾಪನೆಯಾಗುತ್ತಿದೆ. ವಿದೇಶಿ ನೇರ ಬಂಡವಾಳದಲ್ಲಿ ಮುಂಚೂಣಿಯಲ್ಲಿದ್ದು, 2017-18ರಲ್ಲಿ 32.7 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಾಗಿದೆ.

ರಾಜ್ಯದಲ್ಲಿ ಕೈಗಾರಿಕೆಗೆ ಪೂರಕವಾದ ಪರಿಸರವಿದ್ದು, ಜಿಲ್ಲೆ-ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಉತ್ತಮ ರಸ್ತೆಗಳಿವೆ. ರಾಜ್ಯದ ಎಲ್ಲಾ ಭಾಗಗಳು ಏಕರೂಪದಲ್ಲಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶ ಹೊಂದಲಾಗಿದೆ.

ಇತ್ತೀಚಿನ ತುಮಕೂರಿನ ಉದ್ಯೋಗ ಮೇಳದಲ್ಲಿ 20 ಸಾವಿರ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು 8 ಸಾವಿರ ಮಂದಿ ನೋಂದಣಿ ಮಾಡಿಸಿ 4 ಸಾವಿರ ಮಂದಿಗೆ ಉದ್ಯೋಗ ಭರವಸೆ ಸಿಕ್ಕಿದ್ದು,160 ವಿವಿಧ ಕಂಪನಿ ಪಾಲ್ಗೊಂಡಿತ್ತು. 2,500 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ.

ಉದ್ಯೋಗ ದೊರಕಿಸುವ ಮತ್ತು ಆರ್ಥಿಕಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಇದೆ ಎಂದು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಬೆಂಗಳೂರಿನಲ್ಲಿ ಸೆಮಿ ಕಂಡಕ್ಟರ್, ನ್ಯಾನೋ, ರೊಬೋಟಿಕ್, ಡ್ರೋಣ್ ಸೇರಿದಂತೆ ವಿವಿಧ ವಲಯಗಳಲ್ಲಿ ಕೂಡ ಕೈಗಾರಿಕಾಭಿವೃದ್ಧಿಯಾಗುತ್ತಿದೆ.ಬಹು ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ.ರಾಜ್ಯದ ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕ ಪ್ರಗತಿಗೆ ಒತ್ತು ಕೈಗಾರಿಕೆಗೆ ಬೇಕಾದ ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ.

ಈ ಕ್ಲಸ್ಟರ್‍ಗಳು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕೆಂಬ ಅಪೇಕ್ಷೆ ಇದೆ.ಅತ್ಯುತ್ತಮ ಉತ್ಪಾದನಾ ವಲಯವನ್ನಾಗಿಸುವುದು ನಮ್ಮ ಉದ್ದೇಶ ಎಂದರು.

ಕೈಗಾರಿಕಾಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಒತ್ತು, ಕೊಪ್ಪಳ, ಆಟಿಕೆ ಉದ್ಯಮ, ಬಳ್ಳಾರಿ ಜವಳಿ ಕ್ಲಸ್ಟರ್‍ಗಳ ಸ್ಥಾಪನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ರಾಜ್ಯ ಸರ್ಕಾರದ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್.ಸುಬ್ರಮಣ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತ, ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಏಕಸ್ ಗ್ರೂಪ್ ಸಿಇಒ ಅಧ್ಯಕ್ಷ ಅರವಿಂದ ಮೆಳ್ಳಿಗೇರಿ, ಆನಂದ್ ಪದ್ಮನಾಭ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ