
ಬೆಂಗಳೂರು, ಫೆ.16-ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದ ಚೋರರು 2 ಲಕ್ಷ ಹಣವಿದ್ದ ಬ್ಯಾಗನ್ನು ದೋಚಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿ.ಎಂ.ಎಲ್.ಗೌಡ ಎಂಬುವರು ಕುರುಬರಹಳ್ಳಿಯಲ್ಲಿನ ಕೆನರಾ ಬ್ಯಾಂಕ್ಗೆ ಹಣ ಕಟ್ಟುವ ಸಲುವಾಗಿ 2 ಲಕ್ಷ ಹಣವನ್ನು ಬ್ಯಾಗ್ನಲ್ಲಿಟ್ಟುಕೊಂಡು ಜಾಲಹಳ್ಳಿ ಕ್ರಾಸ್ನಿಂದ ಕುರುಬರಹಳ್ಳಿ ಕಡೆಗೆ ನಿನ್ನೆ ಬರುತ್ತಿದ್ದರು.
ಮಧ್ಯಾಹ್ನ 12.30ರ ಸಮಯದಲ್ಲಿ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಗೆಳೆಯರ ಬಳಗದ 2ನೇ ಹಂತದಲ್ಲಿರುವ ಅನುಗ್ರಹ ಪ್ಲಾಜಾ ಬಳಿ ಕಾರನ್ನು ಪಾರ್ಕಿಂಗ್ ಮಾಡಿ ಅಂಗಡಿಗೆ ತೆರಳಿದ್ದಾರೆ.ಈ ಸಮಯವನ್ನೇ ಕಾದಿದ್ದ ಚೋರರು ಕಾರಿನ ಗಾಜು ಒಡೆದು 2 ಲಕ್ಷ ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಗೌಡ ಅವರು 10 ನಿಮಿಷದಲ್ಲೇ ವಾಪಸ್ ಕಾರಿನ ಬಳಿ ಬರುವಷ್ಟರಲ್ಲಿ ಈ ಕಳ್ಳತನ ನಡೆದಿದೆ.
ತಕ್ಷಣ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರು ಪಾರ್ಕಿಂಗ್ ಮಾಡಿದ್ದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿ ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.