ನವದೆಹಲಿ,ಫೆ.15-ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಆತ್ಮಾಹುತಿ ದಳದ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 37 ಮಂದಿ ಭಾರತೀಯ ಯೋಧರು ಹುತಾತ್ಮರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹದ ದಳದ ಕಮಾಂಡೋ ಪಡೆ ಹಾಗೂ ರಾಷ್ಟ್ರೀಯ ಭದ್ರತಾ ದಳ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದೆ.
ರಾಷ್ಟ್ರೀಯ ತನಿಖಾ ದಳ(ಎನ್ಐಎ) ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲು ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋ ಪಡೆ, ರಾಷ್ಟ್ರೀಯ ಭದ್ರತಾ ದಳದ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಇಂದು ತೆರಳಿದೆ.
ಈ ಹಿಂದೆ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಇದೇ ತಂಡ ಭೇಟಿ ನೀಡಿತ್ತು. ಈ ಘಟನೆಯಲ್ಲಿ ಪಾಕ್ ಉಗ್ರರ ಕೈವಾಡ ಇದೆ ಎಂಬುದು ಸಾಬೀತಾಗಿತ್ತು. ನಿನ್ನೆ ಸಂಜೆಯೇ ನವದೆಹಲಿಯಿಂದ ಎನ್ಐಎ ಜೊತೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡವು ತೆರಳಿದ್ದು, ಜಮ್ಮು-ಕಾಶ್ಮೀರದ ಪೆÇಲೀಸರು ತನಿಖೆಗೆ ಕೈ ಜೋಡಿಸಿದ್ದಾರೆ.
ಬಾಂಬ್ ಸ್ಫೋಟವನ್ನು ನಿಖರವಾಗಿ ಪತ್ತೆ ಮಾಡುವ ತಜ್ಞರು, ಕಮಾಂಡೋ ಪಡೆ, ಪುಲ್ವಾಮಾದಲ್ಲಿ ಬೀಡುಬಿಟ್ಟಿದೆ. ನಿನ್ನೆ ಪುಲ್ವಾಮದಲ್ಲಿ ಸೈನಿಕರನ್ನು ಕರೆತರುತ್ತಿದ್ದ ವಾಹನಕ್ಕೆ 100 ಕೆಜಿ ಸ್ಪೋಟಕಗಳಿದ್ದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 37 ಮಂದಿ ಸಿಆರ್ಪಿಎಫ್ ಯೋಧರು ಅಸುನೀಗಿದ್ದರು.
ಘಟನೆಯಲ್ಲಿ ಇನ್ನು ಅನೇಕ ಮಂದಿ ಯೋಧರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ರಾಜಕೀಯ ಕಾರ್ಯಕ್ರಮ: ನಿನ್ನೆ ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಇಂದು ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಇಂದು ನಡೆಸಬೇಕಾಗಿದ್ದ ತಮ್ಮ ಕಾರ್ಯಕ್ರಮಗಳನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದ್ದಾರೆ.