ಶೀಘ್ರದಲ್ಲೇ ಪಾಕಿಸ್ತಾನ ದೊಡ್ಡ ಬೆಲೆ ತೆರಬೇಕಾಗುತ್ತದೆ: ಪ್ರಧಾನ ಮಂತ್ರಿ ಮೋದಿ

ನವದೆಹಲಿ, ಫೆ.15. -ತಾಯ್ನಾಡಿಗಾಗಿ ಹುತಾತ್ಮರಾದ ವೀರ ಯೋಧರ ಸಾವು ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ನೆರೆಯ ರಾಷ್ಟ್ರದಿಂದ ಶಾಂತಿ ಬಯಸುವುದೇ ತಪ್ಪು ಎಂಬುದು ಮನವರಿಕೆಯಾಗಿದೆ. ಉಗ್ರರಿಗೆ ನೆರವು ನೀಡಿ ನಮ್ಮ ಜೊತೆ ಚೆಲ್ಲಾಟವಾಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ನೇರ ಮಾತುಗಳಲ್ಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಒಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಾಕಿಸ್ತಾನದ ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ನಿನ್ನೆಯ ಘಟನೆಯ ನಂತರ ಇಡೀ ಭಾರತೀಯರ ರಕ್ತ ಕುದಿಯುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ನೆರೆಯ ರಾಷ್ಟ್ರ ಪಾಕಿಸ್ತಾನ ಶೀಘ್ರದಲ್ಲೇ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದರು.

ನಮ್ಮ ನೆರೆಯ ರಾಷ್ಟ್ರ ತನ್ನ ತಂತ್ರ ಮತ್ತು ಕುತಂತ್ರಗಳಿಂದ ಭಾರತವನ್ನು ಅಸ್ಥಿರಗೊಳಿಸಬಹುದೆಂದು ಯೋಚಿಸಿದರೆ ಅದು ತಪ್ಪು. ಯೋಧರ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವೇ ಇಲ್ಲ. ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರಾಷ್ಟ್ರವಾದ ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡುವ ಸಮಯ ಬಂದಿದೆ ಎಂದರು.

ಯಾವ ರಾಷ್ಟ್ರವನ್ನು ನಂಬಿಕಸ್ಥರು ಎಂದುಕೊಂಡಿದ್ದೇವೊ ಅವರೇ ಇಂದು ನಮ್ಮ ಯೋಧರನ್ನು ಹತ್ಯೆಗೈಯ್ಯುವಂತಹ ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ. ನಿನ್ನೆಯಿಂದ ದೇಶದಲ್ಲಿ ನೀರವ ಮೌನ ಆವರಿಸಿದೆ. ಉಗ್ರರ ದುಷ್ಕøತ್ಯಕ್ಕೆ ಇಡೀ ರಾಷ್ಟ್ರದ ಮನಸ್ಸುಗಳು ಆಕ್ರೋಶಗೊಂಡಿವೆ. ನೆರೆಯ ರಾಷ್ಟ್ರಕ್ಕೆ ಪಾಠ ಕಲಿಸಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಭಯೋತ್ಪಾದನೆ ಹೋರಾಟದಲ್ಲಿ ನೆರೆ ರಾಷ್ಟ್ರ ಕೈ ಜೋಡಿಸುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಅವರೆಂದೂ ಪಾಠ ಕಲಿಯುವ ಲಕ್ಷಣಗಳಿಲ್ಲ. ಮಾತು ಮತ್ತು ಕೃತಿ ನಡುವೆ ಸಾಕಷ್ಟು ವ್ಯತ್ಯಾಸಗಳನ್ನು ಕಾಣುತ್ತಿದ್ದೇವೆ. ನಿನ್ನೆ ಪುಲ್ವಾಮದಲ್ಲಿ ಆಗಿರುವ ಘಟನೆ ಭವಿಷ್ಯದಲ್ಲಿ ಮತ್ತೆ ಮರುಕಳಿಸಬಾರದು. ಉಗ್ರರು ಬಹುದೊಡ್ಡ ಪ್ರಮಾದ ಎಸಗಿದ್ದಾರೆ. ಅವರು ಎಲ್ಲೇ ಅಡಗಿದ್ದರೂ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸೈನಿಕರಿಗೆ ನಾವು ಸಂಪೂರ್ಣವಾಗಿ ಸ್ವತಂತ್ರ ನೀಡಿದ್ದೇವೆ. ಯಾವುದೇ ವಿಷಯದಲ್ಲಿ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಈಗಲೂ ಸೇನಾಪಡೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಮ್ಮತಿ ನೀಡುತ್ತೇವೆ. ಶಾಂತಿ, ಸುಖ ಮತ್ತು ನೆಮ್ಮದಿ ಬಯಸುವ ರಾಷ್ಟ್ರದ ಮೇಲೆ ದಾಳಿ ನಡೆಸಿದರೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಭಯೋತ್ಪಾದನಾ ವಿರುದ್ದದ ಹೋರಾಟದಲ್ಲಿ ನೆರೆಯ ರಾಷ್ಟ್ರವನ್ನು ಏಕಾಂಗಿಗೊಳಿಸಿ ಅದರ ಕಪಟತನವನ್ನು ವಿಶ್ವದ ಮುಂದೆ ಬೆತ್ತಲು ಮಾಡಲಾಗುವುದು. ಶಾಂತಿಯಲ್ಲಿ ನಂಬಿಕೆ ಇಟ್ಟಿರುವ ನಮ್ಮ ರಾಷ್ಟ್ರದ ಮೇಲೆ ನಡೆದಿರುವ ದಾಳಿಯನ್ನು ಸಹಿಸುವುದಿಲ್ಲ. ಭಯೋತ್ಪಾದಕರು ಯಾವುದೇ ಬಿಲದಲ್ಲಿ ಅಡಗಿದ್ದರೂ ಸರಿಯೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿ, ಪಾಕಿಸ್ತಾನ ಪುನಃ ತಾನೇನೆಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದೆ. ಪುಲ್ವಾಮದಲ್ಲಿ ನಡೆದ ಘಟನೆ ಮನುಕುಲದ ಮೇಲೆ ನಡೆದ ಪೈಶಾಚಿಕ ಕೃತ್ಯ.

ನಾವು ಪಾಕಿಸ್ತಾನವನ್ನು ರಾಜತಾಂತ್ರಿಕ ಮಾರ್ಗ, ಸೇನಾಪಡೆ ಸೇರಿದಂತೆ ಎಲ್ಲ ರೀತಿಯಲ್ಲೂ ಏಕಾಂಗಿ ಮಾಡಿ, ವಿಶ್ವದ ಯಾವುದೇ ರಾಷ್ಟ್ರಗಳು ಬೆಂಬಲಕ್ಕೆ ನಿಲ್ಲದಂತೆ ಮನವಿ ಮಾಡಲಿದ್ದೇವೆ. ಈಗಾಗಲೇ ವಿದೇಶಾಂಗ ವ್ಯವಹಾರ ಇಲಾಖೆ ಸಚಿವರು, ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಮತ್ತಿತರರು ಪ್ರಮುಖ ರಾಷ್ಟ್ರಗಳ ರಾಯಭಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಪುಲ್ವಾಮ ಘಟನೆ ಕುರಿತು ಪ್ರಧಾನಿ ಮತ್ತು ಸಚಿವರು ಮಾತುಕತೆ ನಡೆಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಗೃಹಸಚಿವರಾದ ರಾಜನಾಥ್ ಸಿಂಗ್ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ.

ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗುವುದು. ಯಾವುದೇ ಕಾರಣಕ್ಕೂ ಈ ದುಷ್ಕøತ್ಯವನ್ನು ಸಹಿಸುವುದಿಲ್ಲ ಎಂದು ಜೇಟ್ಲಿ ಪಾಕ್‍ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ವಾಯುಸೇನೆ, ಭೂಸೇನೆ, ನೌಕಾಸೇನೆ ಮುಖ್ಯಸ್ಥರು , ಎನ್‍ಐಎ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ದಳ, ಗುಪ್ತಚರ ವಿಭಾಗ ಸೇರಿದಂತೆ ಉನ್ನತ ನಾಯಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ