ಚಿಕ್ಕಮಗಳೂರು, ಫೆ.14-ವಿಷಾಹಾರ ಸೇವಿಸಿ ಶಿರವಾಸೆ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳು ವಾಂತಿ, ನಿಶಕ್ತಿ, ತಲೆನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಮಧ್ಯಾಹ್ನ ಎಂದಿನಂತೆ ಹಾಸ್ಟೆಲ್ನಲ್ಲಿ ನೀಡಿದ ಪುಳಿಯೋಗರೆ ಸೇವಿಸಿ ಶಾಲೆಗೆ ತೆರಳಿದ್ದರು.
ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬಿಸಿಹಾಲು ನೀಡಲಾಗಿತ್ತು. ಹಾಲನ್ನೂ ಸೇವಿಸಿದ ನಂತರ ಪಾಠ-ಪ್ರವಚನಕ್ಕೆ ತೊಡಗಿಕೊಂಡರು ಹಾಸ್ಟೆಲ್ನಿಂದ ಹೋಗುವ 40ಮಕ್ಕಳಿಗೆ ಮಾತ್ರ ಇದ್ದಕ್ಕಿದಂತೆ. ವಾಂತಿ-ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಶಿಕ್ಷಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ತೀವ್ರವಾಗಿ ಅಸ್ತವಸ್ಥರಾದ 33ಮಕ್ಕಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ 5 ಮಂದಿಯನ್ನು ಐಸಿಯುನಲ್ಲಿ ಇರಿಸಲಾಗಿದೆ.
ವಿದ್ಯಾರ್ಥಿಗಳಿಗೆ ಕೊಡಿಸಲಾಗಿದ್ದ ಪುಳಿಯೋಗರೆ ಅಥವಾ ಹಾಲಿನಲ್ಲಿ ಲೋಪ ಇರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದ್ದು ಹಾಸ್ಟೆಲ್ನಲ್ಲಿ ಉಳಿದಿದ್ದ ಕೆಲ ಪದಾರ್ಥಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ.ಯಾವುದೇ ಆತಂಕ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.
ಇಂದು ಸಂಜೆ ಅಥವಾ ನಾಳೆ ಕೆಲವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಕೂಡ ಹೇಳಿದ್ದಾರೆ.ಜಿಲ್ಲಾಧಿಕಾರಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲಾಜೆಸಾಂತ್ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.