
ಕಾರವಾರ, ಫೆ.14- ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರ ಹಾರವಾಡ ಬಳಿ ನಡೆದಿದೆ.
ಮೃತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಪೋಟೋ ಸ್ಟುಡಿಯೋ ಮಾಲೀಕ ರಮೇಶ್ , ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮೀನಾ ಎಂದು ಗೊತ್ತಾಗಿದ್ದು, ಇನ್ನಿಬ್ಬರ ಹೆಸರು ತಿಳಿದುಬಂದಿಲ್ಲ. ಘಟನೆಯಲ್ಲಿ ಪಲ್ಲವಿ ಎಂಬ ಯುವತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಒಡಿಸ್ಸಾ ನೋಂದಣಿ ಸಂಖ್ಯೆಯ ಕಾರಿನಲ್ಲಿ ಇವರೆಲ್ಲರೂ ಪ್ರಯಾಣಿಸುತ್ತಿದ್ದರು.ಇಂದು ಮುಂಜಾನೆ ಎರಡು ವಾಹನಗಳು ಪರಸ್ಪರ ಡಿಕ್ಕಿಯಾಗಿವೆ ಎಂದು ಪೋಲೀಸರು ತಿಳಿಸಿದ್ದಾರೆ.
ಟ್ಯಾಂಕರ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನೊಳಗೆ ಸಿಕ್ಕಿಕೊಂಡು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರ ನೆರವಿನಿಂದ ಒಬ್ಬಾಕೆಯನ್ನು ರಕ್ಷಿಸಲಾಗಿದ್ದು, ಆಕೆಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಇವರೆಲ್ಲರೂ ಸ್ನೇಹಿತರಾಗಿದ್ದು, ಗೋವಾಗೆ ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಪಘಾತದ ನಂತರ ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಘಟನೆಯಿಂದಾಗಿ ಕೆಲಕಾಲ ಈ ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.ಸ್ಥಳಕ್ಕೆ ಧಾವಿಸಿದ ಅಂಕೋಲಾ ಠಾಣೆ ಪೋಲೀಸರು ಸುಮಾರು ಎರಡು ತಾಸು ಪ್ರಯಾಸ ಪಟ್ಟು ಶವಗಳನ್ನು ಹೊರತೆಗೆದು ವಾಹನಗಳನ್ನು ರಸ್ತೆಬದಿ ಸರಿಸಿ ನಂತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಘಟನೆ ಸಂಬಂಧ ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.