ರಾಜ್ಯದಲ್ಲಿ ಲಿಂಗಾನುಪಾತ ಹೆಚ್ಚಾಗಿರುವದು ಕಂಡುಬಂದಿದೆ: ಸಚಿವೆ ಜಯಮಾಲ

ಬೆಂಗಳೂರು, ಫೆ.13-ಕರ್ನಾಟಕದಲ್ಲಿ 0 ರಿಂದ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತವು 2001ರ ಜನಗಣತಿಯಲ್ಲಿ 946 ಇದ್ದು, 2011ರ ಜನಗಣತಿಯಲ್ಲಿ 948ಕ್ಕೆ ಏರಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ.ಜಯಮಾಲಾ ವಿಧಾನಪರಿಷತ್‍ಗೆ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಭಾರತ ರಾಜ್ಯಗಳಾದ ತಮಿಳುನಾಡಿನಲ್ಲಿ 840, ತೆಲಂಗಾಣದಲ್ಲಿ 881 ಇರುತ್ತದೆ. ಆದರೆ ನಮ್ಮ ರಾಜ್ಯದಲ್ಲಿ 2017ನೇ ವರ್ಷದಲ್ಲಾದ ಜನನದಲ್ಲಿ 1ಸಾವಿರ ಗಂಡು ಸಂತತಿಗೆ ಎದುರಾಗಿ 927 ಹೆಣ್ಣು ಸಂತತಿಯಾಗಿದ್ದು, ಇದರ ಅನ್ವಯ ಜನನ ಸಂದರ್ಭದಲ್ಲಿ ಲಿಂಗಾನುಪಾತ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಸಚಿವರು ತಿಳಿಸಿದರು.

ಹೆಣ್ಣು ಮಕ್ಕಳ ರಕ್ಷಣೆ, ಬದುಕುವ ಹಕ್ಕು ಉಳಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಒಟ್ಟು 25,20,340 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಿಂದ ದೇಶಾದ್ಯಂತ ಹೆಣ್ಣು ಮಕ್ಕಳ ಲಿಂಗಾನುಪಾತ ಇಳಿಮುಖವಾಗುತ್ತಿದೆ.

ಭ್ರೂಣ ಹತ್ಯೆ ತಡೆಯುವುದು, ಹೆಣ್ಣು ಮಗುವಿನ ರಕ್ಷಣೆ, ಉಳಿವು, ವಿದ್ಯಾಭ್ಯಾಸವನ್ನು ಉತ್ತೇಜಿಸುವುದು ಸರ್ಕಾರದ ಧ್ಯೇಯವಾಗಿದೆ. ಪ್ರತಿ ಹೆಣ್ಣು ಮಗುವಿನ ಜೀವಿಸುವ, ಅಭಿವೃದ್ಧಿ ಹೊಂದುವ, ಸುರಕ್ಷಿತವಾಗಿ ಬದುಕುವ ಸಹಭಾಗಿತ್ವದ ಹಾಗೂ ಪಾಲುದಾರಿಕೆಯ ಹಕ್ಕನ್ನು ಬಾಲ್ಯಾವಸ್ಥೆಯಲ್ಲಿ ಸಂರಕ್ಷಿಸಿ ಈಡೇರಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ 2018ನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ