ಬರ ನಿರ್ವಹಣೆಗೆ ರಾಜ್ಯಸರ್ಕಾರ ಸಮರ್ಪಕ ಕ್ರಮ ಕೈಗೊಂಡಿದೆ: ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಫೆ.13-ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯಸರ್ಕಾರ ಸಮರ್ಪಕ ಕ್ರಮ ಕೈಗೊಂಡಿದ್ದು, ನಿನ್ನೆಯಷ್ಟೆ 162 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಪರಿಷತ್‍ನಲ್ಲಿಂದು ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 5 ಕೋಟಿಗಳಿಗಿಂತ ಕಡಿಮೆ ಅನುದಾನ ಇರದಂತೆ ನೋಡಿಕೊಳ್ಳಲಾಗುತ್ತಿದೆ. ಬರ ಪರಿಸ್ಥಿತಿ ಅವಲೋಕಿಸುವ ಸಲುವಾಗಿ ವಿಭಾಗೀಯ ಮಟ್ಟದಲ್ಲಿ ಸಚಿವ ಸಂಪುಟ ಉಪಸಮಿತಿಗಳನ್ನು ರಚಿಸಲಾಗಿದೆ. 156 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಾನುವಾರುಗಳಿಗೆ ಮೇವು ಖರೀದಿಗೆ ಅಗತ್ಯ 25 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ಸಚಿವರು ಹೇಳಿದರು.

ಜನ ಗುಳೇ ಹೋಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ 2.49 ಕೋಟಿ ರೂ ಬಾಕಿ ಬರಬೇಕಿದ್ದು, ಆ ಹಣ ಇನ್ನೂ ಬಾರದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ರಾಜ್ಯಸರ್ಕಾರವೇ ಅವರಿಗೆ ಹಣ ನೀಡುತ್ತಿದೆ. ಪ್ರವಾಹ ಮತ್ತು ಇತರೆ ಪ್ರಕೃತಿ ವಿಕೋಪ ಕಾರ್ಯಗಳಿಗೆ 351 ಕೋಟಿ ರೂ.ಗಳನ್ನು ಎಲ್ಲ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು ಒದಗಿಸಲು 131 ಕೋಟಿಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಬರಪೀಡಿತವಲ್ಲದ 14 ತಾಲೂಕುಗಳಿಗೆ ಪ್ರತಿ ತಾಲೂಕಿಗೆ 25 ಲಕ್ಷ ಮಂಜೂರಾತಿ ನೀಡಿ 3.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆಯಿಂದ ಕುಡಿಯುವ ನೀರು ಪೂರೈಕೆಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅವಶ್ಯವಿದ್ದಲ್ಲಿ ಉದ್ಯೋಗದ ದಿವಸಗಳನ್ನು 100 ರಿಂದ 150ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ