ಪರಿಷತ್‍ನಲ್ಲಿ ಧರಣಿಯನ್ನು ಹಿಂಪಡೆದ ಬಿಜೆಪಿ ಸದಸ್ಯರು

ಬೆಂಗಳೂರು, ಫೆ.13-ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿದ್ದು, ಸದನ ಸಮಿತಿ ರಚಿಸಬೇಕೆಂದು ಆಗ್ರಹಿಸಿ ನಿನ್ನೆಯಿಂದ ಪರಿಷತ್‍ನಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು.

ಕಲಾಪ ಆರಂಭದಲ್ಲಿ ಧರಣಿ ಮುಂದುವರೆಸಿದ ಪ್ರತಿಪಕ್ಷದ ಸದಸ್ಯರು 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ 1800 ಕೋಟಿ ರೂ.ಗಳಷ್ಟು ವ್ಯವಹಾರ ನಡೆದಿದ್ದು, ನೂರಾರು ಕೋಟಿ ರೂ.ಗಳ ಅವ್ಯವಹಾರವಾಗಿದೆ. ಇದರ ತನಿಖೆಗಾಗಿ ಸದನ ಸಮಿತಿ ರಚಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಪಟ್ಟು ಹಿಡಿದರು.

ಸಭಾಪತಿ ಕೆ.ಪ್ರತಾಪ್‍ಚಂದ್ರಶೆಟ್ಟಿ ಮಾತನಾಡಿ, ನಾಲ್ಕೈದು ದಿನದಲ್ಲಿ ಒಂದು ಗಂಟೆಯೂ ಕೂಡ ಸಭೆ ನಡೆದಿಲ್ಲ. ನಿಮ್ಮ ಮೂಗಿನ ನೇರಕ್ಕೆ ಸಭೆ ನಡೆಸಲು ಸಾಧ್ಯವಿಲ್ಲ. ಸರ್ಕಾರ, ನ್ಯೂನ್ಯತೆಗಳನ್ನು ಸರಿಪಡಿಸುವುದಾಗಿ ಹೇಳಿದೆ, ಅರ್ಥ ಮಾಡಿಕೊಳ್ಳಿ ಎಂದರು.

ಸಭಾನಾಯಕಿ ಜಯಮಾಲಾ ಮಾತನಾಡಿ, ಸದನ ನಡೆಯಲು ಅವಕಾಶ ಮಾಡಿಕೊಡಿ. ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.

ಪ್ರತಿಪಕ್ಷದ ನಾಯಕ ಕೋಟಾಶ್ರೀನಿವಾಸ ಪೂಜಾರಿ ಮಾತನಾಡಿ, ನಮಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ನೀವು ಹೇಳಿದ್ದನ್ನು ಕೇಳಲು ನಾವು ಇಲ್ಲಿ ಕುಳಿತಿಲ್ಲ. ನೂರಾರು ಕೋಟಿ ಅವ್ಯವಹಾರದ ಬಗ್ಗೆ ತನಿಖೆಯಾಗಬೇಕು. ಸದನ ಸಮಿತಿ ರಚಿಸಿ ಎಂದರು.

ಆಗ ಮಧ್ಯಪ್ರವೇಶಿಸಿದ ಸಭಾಪತಿಯವರು, ಇದನ್ನೇ ಮುಂದುವರೆಸಿದರೆ ಹೇಗೆ? ನಮ್ಮ ಮಾತಿಗೂ ಗೌರವ ಕೊಡಿ ಎಂದು ಮನವಿ ಮಾಡಿದರು.

ಆಗ ಮಾತನಾಡಿದ ಕೋಟಾಶ್ರೀನಿವಾಸಪೂಜಾರಿ, ನಾವು ನಮ್ಮ ಪಕ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ದುರಾವಸ್ಥೆ ಬಗ್ಗೆ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡುತ್ತೇವೆ. ಸಭಾಪತಿಗಳ ಪೀಠಕ್ಕೆ ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ