ದೇವನಹಳ್ಳಿ: ಒಂದು ತಿಂಗಳಿನಿಂದ ಯಾರ ಕಣ್ಣಿಗೂ ಬೀಳದ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.
ಅಲ್ಲದೇ ಜಾರಕಿಹೊಳಿ ಜೊತೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವತ್ ನಾರಾಯಣ್ ಕೂಡ ಒಂದೇ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ರೆಬಲ್ ಶಾಸಕರ ಜೊತೆ ಮುಂಬೈ ಹೋಟೆಲ್ನಲ್ಲಿ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಇದ್ದರು ಎನ್ನಲಾಗಿದ್ದು, ಆಪರೇಷನ್ ಕಮಲದ ರೂವಾರಿ ಕೂಡ ಅವರೇ ಆಗಿದ್ದರು ಎನ್ನಲಾಗುತ್ತಿತ್ತು.
ಇಷ್ಟು ದಿನ ಕಾಂಗ್ರೆಸ್ ಮುಖಂಡರು ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದ ನೋಟೀಸ್ಗೆ ಯಾವುದೇ ಬೆಲೆ ನೀಡದೆ ಒಂದು ತಿಂಗಳಿನಿಂದ ಮುಂಬೈನಲ್ಲಿ ತಂಗಿದ್ದ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದಲ್ಲದೇ ರಮೇಶ್ ಬಿಜೆಪಿಯ ಸಂಪರ್ಕದಲ್ಲಿದ್ದು ಪಕ್ಷ ಬಿಟ್ಟು ಬಿಜೆಪಿಗೆ ಸೇರ್ತಾರೆ ಅಂತ ಹೇಳಲಾಗುತ್ತಿತ್ತು. ಇತ್ತ ಬಿಜೆಪಿ ನಾಯಕರು ಕೂಡ ಯಾವ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ, ಅವರಾಗೆ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿತ್ತು.
ಇದರಿಂದ ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಅನ್ನೋ ಅನುಮಾನ ಸೃಷ್ಟಿಯಾಗಿತ್ತು. ಈ ನಡೆಯಿಂದ ಕೋಪಗೊಂಡ ಸಿದ್ದರಾಮಯ್ಯ ಅತೃಪ್ತರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ಗೂ ಕ್ಯಾರೆ ಎನ್ನದ ಶಾಸಕರಿಗೆ ಪಕ್ಷದಿಂದ ಉಚ್ಛಾಟಿಸುವ ಭಯ ಕಾಡಿದ್ದು, ಹೀಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಸದನಕ್ಕೆ ಹಾಜರಾಗ್ತಾರಾ ಅತೃಪ್ತರು?
ಇನ್ನು ಒಬ್ಬೊಬ್ಬರಾಗಿ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿದ್ದು, ಇಂದು ಸದನಕ್ಕೆ ಹಾಜರಾಗುವ ಸಾದ್ಯತೆ ಇದೆ.
ಮತ್ತೊಂದೆಡೆ ಮಾಧ್ಯಮಗಳ ಕಣ್ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿರುವ ಅತೃಪ್ತರು ಸದನಕ್ಕೆ ಹಾಜರಾಗ್ತಾರಾ ಅನ್ನೋ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ನಾರಾಯಣಗೌಡ ಅವರು ಬೆಂಗಳೂರಿಗೆ ಬಂದಿದ್ದಾರೆ. ಇವರೆಲ್ಲ ಸದನಕ್ಕೆ ಹಾಜರಾಗುವ ಸಾದ್ಯತೆ ಇದ್ರೆ, ನಾಗೇಂದ್ರ, ಉಮೇಶ್ ಜಾಧವ್ ಸೇರಿದಂತೆ ಮೂವರು ಅತೃಪ್ತರ ಸುಳಿವು ಇಲ್ಲದಿರುವುದು ಅವರು ಇಂದು ಕೂಡ ಸದನಕ್ಕೆ ಹಾಜರಾಗುವುದು ಅನುಮಾನ ಮೂಡಿಸಿದೆ.