ಅಧಿವೇಶನದಲ್ಲಿ ಜನರಿಗೆ ಸಂಬಂಧಿಸಿದ ವಿಚಾರಗಳು ಪ್ರಸ್ತಪಾವಾಗುತ್ತಿಲ್ಲ: ಸ್ಪೀಕರ್‍ಗೆ ಪತ್ರ ಬರೆದ ಶಾಸಕ ಎ.ಟಿ.ರಾಮಸ್ವಾಮಿ

ಬೆಂಗಳೂರು,ಫೆ.13- ಜನರಿಗೆ ಸಂಬಂಧಿಸಿದ ವಿಚಾರಗಳು ಸದನದಲ್ಲಿ ಚರ್ಚೆಯಾಗುತ್ತಿಲ್ಲ ಎಂದು ಬೇಸರಗೊಂಡು ಗೈರು ಹಾಜರಾತಿಗೆ ಅನುಮತಿ ಕೋರಿ ವಿಧಾನಸಭಾ ಸಭಾಧ್ಯಕ್ಷರಿಗೆ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪತ್ರ ಬರೆದಿದ್ದಾರೆ.

ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ವಿಧಾನಸಭೆ ಸಮಾವೇಶಗೊಂಡಾಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಎ.ಟಿ.ರಾಮಸ್ವಾಮಿಯವರು ಪತ್ರ ಬರೆದಿರುವ ವಿಚಾರವನ್ನು ಸದನದ ಗಮನಕ್ಕೆ ತಂದರು.

ಪತ್ರ ಬರೆದಿರುವ ರಾಮಸ್ವಾಮಿಯವರು ಅಧಿವೇಶನದಲ್ಲಿ ಜನರಿಗೆ ಸಂಬಂಧಿಸಿದ ವಿಚಾರಗಳು ಪ್ರಸ್ತಾಪವಾಗುತ್ತಿಲ್ಲ. ಬೆಂಗಳೂರಿನ ಸುತ್ತಮುತ್ತ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿರುವ ವಿಚಾರದ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿಲ್ಲ. ನಮಗೆ ರಜೆ ಕೊಡಿ ಕ್ಷೇತ್ರದ ಜನರ ಕೆಲಸವನ್ನು ಮಾಡುತ್ತೇನೆ. ಗೈರು ಹಾಜರಾತಿಗೆ ಅನುಮತಿ ಕೊಡಿ ಎಂದು ಉಲ್ಲೇಖಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲೂ ಈ ವಿಚಾರದ ಚರ್ಚೆಗೆ ಸೂಚನೆ ಕೊಟ್ಟರೂ ಅವಕಾಶ ಸಿಗಲಿಲ್ಲ. ಹೀಗಾಗಿ ಗೈರು ಹಾಜರಿಗೆ ಅನುಮತಿ ಕೋರಿದ್ದೇನೆ. ನಮ್ಮ ನಿಮ್ಮ ಮೇಲೆ ಸಾರ್ವಜನಿಕವಾಗಿ ಯಾವ ಅಭಿಪ್ರಾಯ ಮೂಡುತ್ತದೆ. ಈ ರೀತಿ ಸದನ ನಡೆದರೆ ಯಾವ ಅಭಿಪ್ರಾಯ ಬರಬಹುದು. ನಿರೀಕ್ಷಿತ ಫಲ ಸಿಗುತ್ತಿಲ್ಲ ಎಂದು ಎ.ಟಿ.ರಾಮಸ್ವಾಮಿಯವರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಸಭಾಧ್ಯಕ್ಷರು ತಿಳಿಸಿದರು.

ಇದೇ ರೀತಿ ಐದಾರು ಮಂದಿ ಸದಸ್ಯರು ಪತ್ರ ಕೊಟ್ಟರೆ ಸಾರ್ವಜನಿಕವಾಗಿ ನನ್ನ ಬಗ್ಗೆ ಹಾಗೂ ಸದನದ ಬಗ್ಗೆ ಎಂತಹ ಅಭಿಪ್ರಾಯ ಬರಬಹುದು ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರೂ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಮಾಧುಸ್ವಾಮಿ, ಎ.ಟಿ.ರಾಮಸ್ವಾಮಿಯವರು ಮಾಡಿದ ಕೆಲಸವನ್ನು ನಾವೇ ಮಾಡಿಕೊಂಡಿದ್ದೆವು ಎಂದು ದನಿಗೂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ