ರಾತ್ರೋ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಬಂದ ಜೆಡಿಎಸ್ ಶಾಸಕ

ಬೆಂಗಳೂರು: ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಮುಂಬೈನಲ್ಲೇ ತಂಗಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ ತಡರಾತ್ರಿ ಮುಂಬೈನಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಅಪರೇಶನ್ ಕಮಲದ ತೆಕ್ಕೆಯಲ್ಲಿದ್ದಾರೆಂಬ ಊಹಾಪೋಹ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಜೆಡಿಎಸ್ ಪಕ್ಷವನ್ನು ಬಿಡುವುದಿಲ್ಲ.

ನನ್ನನ್ನು ಖರೀದಿಸುವ ಶಕ್ತಿ ಯಾರಿಗೂ ಇಲ್ಲ. 10 ಬಿಜೆಪಿ ಶಾಸಕರ ಕೆಪಾಸಿಟಿ ನನಗೆ ಇದೆ. ನನ್ನ ಎಲ್ಲಾ ವ್ಯವಹಾರಗಳು ಮುಂಬೈನಲ್ಲಿವೆ. ನಾನು ಮುಂಬೈನಲ್ಲಿ ಇದ್ದರೂ ಸಿಎಂ ಕುಮಾರಣ್ಣನ ಸಂಪರ್ಕದಲ್ಲಿದ್ದೆ. ಅನಾರೋಗ್ಯದ ಕಾರಣ ಬಂದಿರಲಿಲ್ಲ ಎಂದಿದ್ದಾರೆ. ಬೆಂಗಳೂರಿಗೆ ಬರ್ತಿದ್ದಂತೆ ಶಾಸಕ ನಾರಾಯಣ ಗೌಡ ಅವರನ್ನು ತಾಜ್ ವೆಸ್ಟೆಂಡ್ ಗೆ ಕರೆತಂದ ಸಚಿವ ಸಾ.ರಾ.ಮಹೇಶ್,  ನಾರಾಯಣಗೌಡರು‌ ನೆನ್ನೆ ಸಿಎಂ ಜೊತೆ ಮಾತುಕತೆ ನಡೆಸಿ ಮಂಗಳವಾರ ಬರುತ್ತೇನೆ ಎಂದು ಹೇಳಿದ್ದರು. ಅದರಂತೆ ಏರ್ ಪೋರ್ಟ್ ನಿಂದ  ಕರ್ಕೊಂಡು ಬಂದಿದ್ದೀವಿ. ಅವರ ಆರೋಗ್ಯ ಚೆನ್ನಾಗಿದೆ ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ