ಬೆಂಗಳೂರು,. ಫೆ. 13- ಸರ್ಕಾರ ಅತಂತ್ರಗೊಳಿಸುವ ಪ್ರಯತ್ನದ ಭಾಗವಾಗಿ ಮುಂಬೈನ ಹೊಟೇಲ್ನಲ್ಲಿ ತಂಗಿದ್ದ ನಾಲ್ವರು ಶಾಸಕರು ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಮಾಧ್ಯಮಗಳ ಜೊತೆ ಮಾತನಾಡಿ ತಮಗೆ ಯಾವುದೇ ಅಸಮಾಧಾನವಿಲ್ಲ, ತಾವು ಪಕ್ಷದಲ್ಲೇ ಇದ್ದೇವೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ನಾವು ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರು, ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಸ್ಥಿತಿ ನಮ್ಮದು. ಪಕ್ಷದ ನಾಯಕರ ನಡುವಿನ ಜಗಳದಲ್ಲಿ ನಾವು ಬಡವಾದೆವು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನಗೆ ಆರೋಗ್ಯ ಸರಿಯಿರಲಿಲ್ಲ. ಹಾಗಾಗಿ ವಿಧಾನಸಭೆ ಕಲಾಪ ಮತ್ತು ಕಾಂಗ್ರೆಸ್ ಶಾಸಕಾಂಗ ಸಭೆಗೆ ಬರಲಾಗಲಿಲ್ಲ. ಬಿಜೆಪಿಯ ಸಂಪರ್ಕದಲ್ಲೂ ನಾನಿರಲಿಲ್ಲ. ಯಾವ ಅತೃಪ್ತರ ಜೊತೆಯಲ್ಲೂ ನಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ನಮ್ಮ ನಾಯಕರಾದ ರಮೇಶ್ ಜಾರಕಿ ಹೊಳಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಅಸಮಾಧಾನವಿದ್ದದ್ದು ನಿಜ. ಅದು ಸಣ್ಣದರಲ್ಲೇ ಮುಗಿಯಬೇಕಿತ್ತು. ವಿಕೋಪಕ್ಕೆ ಹೋಯಿತು. ಎಲ್ಲವೂ ಸಾಂದರ್ಭಿಕ, ಕಾಕತಾಳೀಯ ಎಂದು ವಿಷಾದಿಸಿದರು.
ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿಯಾಗುತ್ತೇನೆ. ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲ. ಅಸಾಮಾಧಾನಗಳಿದ್ದರೂ ಅದನ್ನು ಬಗೆಹರಿಸಿಕೊಳ್ಳುತ್ತೇನೆ. ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ, ಪಕ್ಷದಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿದರು.
ನನ್ನನ್ನು ಯಾರೂ ನಿರ್ಬಂಧಿಸಿರಲಿಲ್ಲ. ನಾವೇನು ಚಿಕ್ಕಮಕ್ಕಳಲ್ಲ. ಯಾರು ಒತ್ತಡ ಹಾಕಿದರೂ ಹಿಂದೆ ಸರಿಯುವುದಿಲ್ಲ. ಅಧಿವೇಶನದಲ್ಲಿ ಕಾಂಗ್ರೆಸ್ ಪರವಾಗಿಯೇ ಮತ ಹಾಕುತ್ತೇನೆ ಎಂದು ಹೇಳಿದರು.
ಉಮೇಶ್ ಜಾಧವ್ ಮಾತನಾಡಿ, ಸಿದ್ದರಾಮಯ್ಯ ಅವರು ನಮ್ಮ ನಾಯಕ. ನಾನು ಯಾವ ತಪ್ಪನ್ನೂ ಮಾಡಿಲ್ಲ. ಮುಂಬೈಗೂ ಹೋಗಿರಲಿಲ್ಲ. ಬಿಜೆಪಿಯಲ್ಲೂ ನನಗೆ ಗೆಳೆಯರಿದ್ದಾರೆ. ಅವರ ಸಂಪರ್ಕದಲ್ಲಿ ಇರದೆ ಇರಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಪಕ್ಷ ಬಿಟ್ಟು ಹೋಗಿದ್ದೇನೆ ಎಂದು ಅರ್ಥ ಅಲ್ಲ. ಪಕ್ಷದಲ್ಲೇ ಇರುತ್ತೇನೆ. ಇಂದು ಅಧಿವೇಶನದಲ್ಲಿ ಮತದಾನ ನಡೆಯುವುದಿದೆ. ಅದಕ್ಕಾಗಿ ಬಂದಿದ್ದೇನೆ. ವೈಯಕ್ತಿಕ ಕಾರಣಕ್ಕಾಗಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿಕ್ಕೆ ಆಗಲಿಲ್ಲ ಎಂದು ಹೇಳಿದರು.
ನಾನು ನನ್ನ ಶಾಸಕ ಸ್ಥಾನಕೆಕ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್ ಸಿಎಲ್ಪಿ ಸಭೆ ಗೈರು ಹಾಜರಿನ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಿ. ಸರ್ಕಾರ ಬೀಳಿಸುವ ಪ್ರಯತ್ನದಲ್ಲಿ ನಾನು ಭಾಗಿಯಾಗಿಲ್ಲ, ಸಚಿವಾಕಾಂಕ್ಷಿಯೂ ನಾನಲ್ಲ ಅಂದರು.
ನನ್ನ ಕ್ಷೇತ್ರದ ಮಟ್ಟಿಗೆ ಕೆಲ ಸಮಸ್ಯೆಗಳಿವೆ. ನನಗೆ ಸಚಿವ ಸ್ಥಾನ ನೀಡಬೇಕೆಂದುಕ್ಷೇತ್ರದ ಮತದಾರರ ಒತ್ತಾಯ. ಮಲ್ಲಿಕಾರ್ಜುನ್ ಖರ್ಗೆ ಅವರು ದೊಡ್ಡವರು.ಅವರ ಬಗ್ಗೆ ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದು ಉಮೇಶ್ಜಾಧವ್ ಸ್ಪಷ್ಟಪಡಿಸಿದರು.