ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಅಂತ್ಯ ಕಾಣದ ಆಡಿಯೋ ಜಟಾಪಟಿ

ಬೆಂಗಳೂರು, ಫೆ.13-ವಿವಾದಿತ ಆಡಿಯೋ ಬಗ್ಗೆ ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ನಡೆಯುತ್ತಿರುವ ಜಟಾಪಟಿ ಇಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ತಾರ್ಕಿಕ ಅಂತ್ಯ ಕಾಣದೆ ವಿಫಲವಾಗಿದೆ.

ಫೆ.8 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋ ಕುರಿತಂತೆ ವಿಧಾನಸಭೆಯಲ್ಲಿ ಸೋಮವಾರ ಮತ್ತು ಮಂಗಳವಾರ ಎರಡು ದಿನ ಸಂಪೂರ್ಣ ಚರ್ಚೆಯಾಗಿದೆ. ಮೊದಲ ದಿನ ಚರ್ಚೆಯಲ್ಲೇ ಸ್ಪೀಕರ್ ಅವರ ಸಲಹೆ ಮೇರೆಗೆ ರಾಜ್ಯಸರ್ಕಾರ ವಿಶೇಷ ತನಿಖಾ ದಳ (ಎಸ್‍ಐಟಿ)ದ ತನಿಖೆಯನ್ನು ಘೋಷಿಸಿದೆ.

ಆದರೆ ಇದಕ್ಕೆ ವಿರೋಧ ಪಕ್ಷವಾದ ಬಿಜೆಪಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಎಸ್‍ಐಟಿ ತನಿಖೆಯಿಂದ ಶಾಸಕರನ್ನು ಪೊಲೀಸರ ಕಿರುಕುಳಕ್ಕೆ ಒಳಪಡಿಸಬೇಡಿ. ವಿಧಾನಸಭೆಯ ವ್ಯಾಪ್ತಿಯೊಳಗೆ ಇರುವ ಸದನ ಸಮಿತಿ, ಶಿಷ್ಟಾಚಾರ ಸಮಿತಿಗೆ ಬೇಕಿದ್ದರೆ ಒಪ್ಪಿಸಿ, ಅನಿವಾರ್ಯವಾದರೆ ನ್ಯಾಯಾಂಗ ತನಿಖೆಯನ್ನಾದರೂ ಮಾಡಿ ಎಸ್‍ಐಟಿ ತನಿಖೆ ಮಾತ್ರ ಬೇಡ ಎಂದು ಮನವಿ ಮಾಡಿದೆ.

ಆದರೆ ಇದಕ್ಕೆ ಆಡಳಿತ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್‍ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎರಡು ದಿನಗಳಿಂದ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಯಡಿಯೂರಪ್ಪ ಅವರು ನಿನ್ನೆ ಸಂಜೆ ಮೌನ ಮುರಿದಿದ್ದು, ಕುಮಾರಸ್ವಾಮಿಯವರು 40 ನಿಮಿಷಗಳ ಮಾತುಕತೆಯ ಪೈಕಿ ಕೇವಲ ಮೂರ್ನಾಲ್ಕು ನಿಮಿಷಗಳ ಆಡಿಯೋವನ್ನು ಬಿಡುಗಡೆ ಮಾಡಿ ನಮ್ಮ ಮಾತುಗಳನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ನಕಲಿ ದಾಖಲಾತಿ ಸೃಷ್ಟಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.

ಕಾಕತಾಳೀಯ ಎಂಬಂತೆ ಇಂದು ಬೆಳಗ್ಗೆ ಸಂಭಾಷಣೆ ಪೂರ್ಣ ಪ್ರಮಾಣದ ಆಡಿಯೋ ಬಿಡುಗಡೆಯಾಗಿದೆ. ನಿನ್ನೆ ಬೆಳವಣಿಗೆಗೆ ಸಂಬಂಧಪಟ್ಟಂತೆ ಆಡಳಿತ ಪಕ್ಷ ಮತ್ತು ಸ್ಪೀಕರ್ ಅವರು ಸ್ವಲ್ಪ ಮೃದುವಾಗಿದ್ದು, ಸದನ ಸಮಿತಿಯ ತನಿಖೆಗೆ ಒಪ್ಪಿಸಿ ವಿಷಯವನ್ನು ಕೈಬಿಡುವ ನಿರ್ಧಾರ ಮಾಡಿದ್ದರು. ಅದರಂತೆ ಆ ಬಗ್ಗೆ ಚರ್ಚೆ ಮಾಡಲು ಹಾಗೂ ನಿನ್ನೆ ಯಡಿಯೂರಪ್ಪ ನೀಡಿದ ಸಲಹೆ ಆಧರಿಸಿ ಇಂದು ಬೆಳಗ್ಗೆ ಸ್ಪೀಕರ್ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ,ಜಗದೀಶ್ ಶೆಟ್ಟರ್, ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಗೋವಿಂದ ಕಾರಜೋಳ, ಸಚಿವರಾದ ಕೃಷ್ಣಬೈರೇಗೌಡ ಅವರುಗಳು ಭಾಗವಹಿಸಿದ್ದರು.

ಮೂಲಗಳ ಪ್ರಕಾರ ಈಗಾಗಲೇ ನಾವು ಎಸ್‍ಐಟಿ ತನಿಖೆಯನ್ನು ಘೋಷಣೆ ಮಾಡಿದ್ದೇವೆ. ಸಾರ್ವಜನಿಕವಾಗಿ ಈ ವಿಷಯ ಪ್ರಚಾರವಾಗಿದೆ. ಈ ಹಂತದಲ್ಲಿ ತನಿಖೆಯಿಂದ ಹಿಂದೆ ಸರಿದರೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಎಸ್‍ಐಟಿಯಿಂದ ಯಾರಿಗೂ ಕಿರುಕುಳ ಆಗುವುದಿಲ್ಲ. ತಪ್ಪು ಮಾಡಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ, ತಪ್ಪೇ ಮಾಡದವರು ಭಯ ಬೀಳುವ ಅಗತ್ಯವೇನು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾದಿಸಿದ್ದಾರೆ ಎನ್ನಲಾಗಿದೆ.

ಆಡಿಯೋದಲ್ಲಿರುವ ಎಲ್ಲಾ ಹೇಳಿಕೆಗಳನ್ನು ಲಿಖಿತರೂಪದಲ್ಲಿ ದಾಖಲಿಸಿ ಸುಮಾರು 28 ಪುಟಗಳ ದಾಖಲೆಯನ್ನು ಸಭೆಯಲ್ಲಿ ಮಂಡಿಸಲಾಯಿತು.ಹೀಗಾಗಿ ಬಿಜೆಪಿಯವರು ಆಡಿಯೋ ಬಗ್ಗೆ ಯಾವುದೇವಿರೋಧ ವ್ಯಕ್ತಪಡಿಸಲಾಗಿದೆ ಅಸಹಾಯ ಸ್ಥಿತಿ ತಲುಪಿದರು.

ಎಸ್‍ಐಟಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ದೇಶದಲ್ಲೇ ಮೊದಲ ಬಾರಿಗೆ ವಿಧಾನಸಭೆಗೆ ಸಂಬಂಧಪಟ್ಟಂತಹ ವಿಚಾರವನ್ನು ಪೊಲೀಸರ ತನಿಖೆಗೆ ಒಪ್ಪಿಸುತ್ತಿರುವುದು ಒಳ್ಳೆಯ ಸಂಪ್ರದಾಯವಲ್ಲ. ನಿಮ್ಮ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಿ ಎಂದು ಬಿಜೆಪಿ ಮನವಿ ಮಾಡಿದೆ.

ಆಡಳಿತ ಮತ್ತು ಪ್ರತಿಪಕ್ಷದ ರಾಜಕೀಯ ಜಂಜಾಟದಲ್ಲಿ ನನ್ನ ತೇಜೋವಧೆ ನಡೆಯುತ್ತಿದೆ ಎಂದು ಸ್ಪೀಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಾದ-ವಿವಾದಗಳು ತಾರ್ಕಿಕ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಬಿಜೆಪಿಯವರು ತಮ್ಮ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ ನಂತರ ನಿರ್ಧಾರ ತಿಳಿಸುವುದಾಗಿ ಹೇಳಿ ಹತ್ತು ನಿಮಿಷ ಕಾಲಾವಧಿ ಕೇಳಿಸಭೆಯಿಂದ ಹೊರ ನಡೆದರು.

ಸಭೆಯ ಕಾರಣಕ್ಕಾಗಿ 11 ಗಂಟೆಗೆ ಆರಂಭವಾಗಬೇಕಿದ್ದ ವಿಧಾನಸಭೆ ಅಧಿವೇಶನ 12 ಗಂಟೆಯಾದರೂ ಪ್ರಾರಂಭವಾಗಿರಲಿಲ್ಲ.

ನಂತರ ಸಭೆ ಆರಂಭಗೊಂಡಾಗಲೂ ಆಡಳಿತ-ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಗೊಳಿಸದ ಹಿನ್ನೆಲೆಯಲ್ಲಿ ಸಭೆಯ ಯಾವುದೇ ಫಲ ನೀಡದೆ ಅಂತ್ಯ ಕಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ