ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್

ಬೆಂಗಳೂರು,ಫೆ.13-ಅಪರೇಷನ್ ಕಮಲದ ಅಡಿಯೋ ಬಹಿರಂಗಗೊಂಡು ತೀವ್ರ ಮುಜುಗರಕ್ಕೆ ಸಿಲಿಕಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಕರ್ನಾಟಕದಲ್ಲಿ ಸರ್ಕಾರ ಉರುಳಿಸುವ ಕೆಲಸವನ್ನು ಕೈ ಬಿಟ್ಟು ಲೋಕಸಭಾ ಚುನಾವಣೆ ಸಿದ್ಧತೆಯತ್ತ ಗಮನಹರಿಸಿ ಎಂದು ರಾಜ್ಯದ ನಾಯಕರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಆದ್ದರಿಂದ, ಆಪರೇಷನ್ ಕಮಲಕ್ಕೆ ತಡೆ ಬಿದ್ದಿದೆ.

ಆಡಿಯೋ ವಿವಾದ ಜೋರಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಹೈಕಮಾಂಡ್ ಖಡಕ್ ಸಂದೇಶ ರವಾನೆ ಮಾಡಿದ್ದು, ಸದ್ಯಕ್ಕೆ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿಗೆ ಈಗ ತೀವ್ರ ಹಿನ್ನಡೆಯಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಯೋಜನೆಯನ್ನು ಸದ್ಯಕ್ಕೆ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಆಪರೇಷನ್ ಕಮಲದ ಆಡಿಯೋ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ಬಿಜೆಪಿಗೆ ಮುಜುಗರ ಉಂಟಾಗಿದೆ. ಅದರಲ್ಲೂ ಆಡಿಯೋದಲ್ಲಿ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಧ್ವನಿ ಇದೆ ಎಂಬುದು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಬಿಜೆಪಿ ಪಕ್ಷ ಸರ್ಕಾರ ಬೀಳಿಸಲು ಪ್ರಯತ್ನ ನಡೆಸುತ್ತಿದೆ ಎಂಬ ಆರೋಪವಿತ್ತು. ಕಾಂಗ್ರೆಸ್-ಜೆಡಿಎಸ್ ನಾಯಕರು ಆಡಿಯೋ ಟೇಪ್ ಬಿಡುಗಡೆ ಮಾಡುವ ಮೂಲಕ ಬಿಜೆಪಿಯ ಪ್ರಯತ್ನಕ್ಕೆ ತಡೆ ಹಾಕಿದೆ.

ಈ ಬೆಳವಣಿಗೆಯಿಂದಾಗಿ ಸದ್ಯ, ಬಿಜೆಪಿಯಲ್ಲೇ ಕಿತ್ತಾಟ ಶುರುವಾಗಿದೆ. ಇದರ ಜೊತೆಗೆ, ಯಡಿಯೂರಪ್ಪ, ಶಿವನಗೌಡ ನಾಯಕ್ ವಿರುದ್ಧ ಮೈತ್ರಿ ಸರ್ಕಾರದ ನಾಯಕರು ಆಡಿಯೋ ಬಾಂಬ್ ಸಿಡಿಸಿದ್ದಾರೆ. ಈ ಮಧ್ಯೆ, ಬಿಜೆಪಿಯ ಪ್ರತಿ ಯೋಜನೆ ಕೂಡ ಸೋರಿಕೆ ಆಗುತ್ತಿದೆ ಎನ್ನಲಾಗಿದೆ. ಈ ವಿಚಾರವಾಗಿ ಬಿ.ಎಲ್. ಸಂತೋಷ್, ಅನಂತ್ ಕುಮಾರ್ ಹೆಗಡೆ, ವಿ. ಸೋಮಣ್ಣ ಸೇರಿದಂತೆ ಹಲವರ ವಿರುದ್ಧ ಯಡಿಯೂರಪ್ಪ ಸಿಟ್ಟಿಗೆದ್ದಿದ್ದಾರಂತೆ. ಹಾಗಾಗಿ, ಲೋಕಸಭೆ ಚುನಾವಣೆಯವರೆಗೆ ಆಪರೇಷನ್ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಿಸಲು ಆಪರೇಷನ್ ಕಮಲ ನಡೆಸಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿರುವುದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವಂತೆ ಮಾಡಿದೆ. ಆಪರೇಷನ್ ಆಡಿಯೋದ ಬೆನ್ನಲ್ಲೇ ಈ ಸಂದೇಶ ರವಾನೆ ಆಗಿದ್ದು, ಆಡಿಯೋವನ್ನೇ ಬಿಜೆಪಿ ವಿರುದ್ಧ ಅಸ್ತ್ರವಾಗಿ ಪ್ರಯೋಗ ಮಾಡಿದ್ದ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಕೂಡ ಆಡಿಯೋ ಬಿಡುಗಡೆ ಮಾಡಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು.

ಆಪರೇಷನ್ ಆಡಿಯೋ ಸಂಬಂಧ ಎಸ್‍ಐಟಿ ತನಿಖೆಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಕಳೆದ 2 ದಿನಗಳಿಂದ ವಿಧಾನಸಭಾ ಅಧಿವೇಶನದಲ್ಲಿ ಭಾರೀ ಚರ್ಚೆ ನಡೆದಿದೆ. ಇದರ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಬೇಡವೆಂದು ಹೈಕಮಾಂಡ್ ಸೂಚನೆ ನೀಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯುವ ಕಡೆ ಗಮನ ಹರಿಸುವಂತೆ ತಿಳಿಸಿದೆ.

ಯಡಿಯೂರಪ್ಪ ಅವರ ಈ ನಿರ್ಧಾರ ರೆಬೆಲ್ ಶಾಸಕರು ಹಾಗೂ ಪಕ್ಷೇತರರಿಗೆ ತೀವ್ರ ಬೇಸರ ಮೂಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಅತೃಪ್ತ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಆಡಿಯೋ ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಮೈತ್ರಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶ ನೀಡುವ ಸಾಧ್ಯತೆ ಇದೆ. ಆದರೆ, ಎಸ್‍ಐಟಿ ತನಿಖೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಸುಧೀರ್ಘವಾದ ಚರ್ಚೆ ನಡೆಸಿ ಆಡಿಯೋ ಪ್ರಕರಣವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ದೇವೇಗೌಡರ ಜೊತೆ ಚರ್ಚೆ ನಡೆಸಿದ್ದರು. ಎಲ್ಲರೂ ಸೇರಿಯೇ ವ್ಯವಸ್ಥಿತ ಕಾರ್ಯತಂತ್ರ ಮಾಡಿ ಆಡಿಯೋ ಅಸ್ತ್ರವನ್ನು ಸಿದ್ಧಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ