ಬೆಂಗಳೂರು, ಫೆ.12-ಆಪರೇಷನ್ ಕಮಲದ ಆಡಿಯೋವನ್ನು ನಾನು ಮಾಡಿಸಿದ್ದಲ್ಲ. ನಮ್ಮ ಶಾಸಕರ ಮಗನನ್ನು ಬಲವಂತವಾಗಿ ಕರೆದು ಶಾಸಕರ ಖರೀದಿ ಪ್ರಯತ್ನ ಮಾಡಿದ್ದೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿಂದು ಮಾತನಾಡಿದ ಅವರು, ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಸಿಡಿಯನ್ನು ನಾನು ಮಾಡಿಸಿದ್ದೇನೆ ಎಂದು ಹೇಳಿದ್ದೇನೆ.
ಆದರೆ ಅದರ ಹಿನ್ನೆಲೆಯನ್ನೂ ಅರ್ಥ ಮಾಡಿಕೊಳ್ಳಬೇಕು. ದೇವದುರ್ಗದಲ್ಲಿ ಉಳಿದುಕೊಂಡಿದ್ದ ನಾಯಕರು ನಮ್ಮ ಶಾಸಕರ ಪುತ್ರನಿಗೆ ಮಧ್ಯರಾತ್ರಿ 12 ಗಂಟೆಗೆ ಸುಮಾರು 25 ಬಾರಿ ಪೋನ್ ಮಾಡಿದ್ದಾರೆ.ಆಗ ಆತ ನನ್ನನ್ನು ಸಂಪರ್ಕಿಸಿದ್ದ. ಹೋಗಿ ಬಾ ಎಂದು ಹೇಳಿದ್ದೆ. ದೇವದುರ್ಗ ಐಬಿಯಲ್ಲಿ 12 ಗಂಟೆಗೆ ಬಾಗಿಲು ತೆಗೆದು ಕುಳಿತುಕೊಂಡಿದ್ದವರು ಇದನ್ನುಚರ್ಚೆ ಮಾಡುವ ಅಗತ್ಯವೇನಿತ್ತು? ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಿನ್ನೆ ಇಡೀ ದಿನ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆದಿದೆ.ನಾನು ಮಾತನಾಡದೆ ಮೌನವಾಗಿ ಕೇಳಿಸಿಕೊಂಡಿದ್ದೇನೆ. ಸರ್ಕಾರದ ಮೇಲೆ ವಿಶ್ವಾಸ ಇಲ್ಲ, ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ದ್ವೇಷದ ರಾಜಕಾರಣ ನಡೆಯುತ್ತದೆ ಎಂಬೆಲ್ಲ ಮಾತನಾಡಿದ್ದಾರೆ.ನಾನು ಚಕಾರ ಎತ್ತಲಿಲ್ಲ. ಎಂದಿಗೂ ನಾನು ದ್ವೇಷದ ರಾಜಖಾರಣ ಮಾಡಿದವನಲ್ಲ. ಈ ಹಿಂದೆ ಬಿಜೆಪಿ ಜೊತೆ ಮೈತ್ರಿಯೊಂದಗಿಎ ಸರ್ಕಾರ ನಡೆಸಿದಾಗ ಎರಡು ತಿಂಗಳಲ್ಲೇ ಬಿಜೆಪಿ ವಿಧಾನಪರಿಷತ್ ಸದಸ್ಯರೊಬ್ಬರು ನನ್ನ ವಿರುದ್ಧ 150 ಕೋಟಿ ರೂ.ಲಂಚ ಹಗರಣವನ್ನು ಆರೋಪಿಸಿದ್ದರು. ಸಚಿವರಾಗಿದ್ದ ಇನ್ನೊಬ್ಬ ವ್ಯಕ್ತಿ ನನ್ನ ವಿರುದ್ಧ ಕೊಲೆಯತ್ನದ ಆರೋಪ ಮಾಡಿ ಪೋಲೀಸರಿಗೆ ದೂರು ಕೊಟ್ಟಿದ್ದರು. ಆ ಸಂದರ್ಭದಲ್ಲೂ ನಾನು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಆಡಿಯೋ ಪ್ರಕರಣ ಪ್ರಸ್ತಾಪವೇ ಅಪ್ರಸ್ತುತ
ಚರ್ಚೆಯ ನಡುವೆ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರ ವಿಜಿಗೌಡ ಬಳಿ 25 ಕೋಟಿ ರೂ. ಕೇಳಿದ್ದನ್ನು ಪ್ರಸ್ತಾಪಿಸಿದಾಗ ಸಿಟ್ಟಾದ ಕುಮಾರಸ್ವಾಮಿ, ತಾನು ಆ ಆರೋಪವನ್ನೂ ಚರ್ಚೆ ಮಾಡಲು ಸಿದ್ಧನಿದ್ದೇನೆ. ಪಲಾಯನವಾದ ಮಾಡುತ್ತಿಲ್ಲ. 2014ರಲ್ಲಿ ನಡೆದ ಘಟನೆಯನ್ನು ಈಗ ಪ್ರಸ್ತಾಪಿಸಿ ಈಗಿನ ಆಡಿಯೋ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ವಿಜಿಗೌಡ ಅವರ ಪ್ರಕರಣವನ್ನು ನಿಮ್ಮದೇ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಬೇಕಿದ್ದರೆ ತನಿಖೆ ಮಾಡಿಸಿ. ನಾವು ಸಿದ್ಧರಿದ್ದೇವೆ. ಆ ಪ್ರಕರಣ ನಮ್ಮ ಪಕ್ಷದ ಒಳಗೆ ನಡೆದ ಬೆಳವಣಿಗೆ, ನನ್ನ ಕಾರ್ಯಕರ್ತರು ಮತ್ತು ನನ್ನ ನಡುವಿನ ಮಾತುಕತೆ.ನೀವು ಯಾವ ಪಕ್ಷದ ಶಾಸಕರ ಜೊತೆ ಮಾತನಾಡುತ್ತಿದ್ದೀರ ಎಂದು ಯಡಿಯೂರಪ್ಪ ಅವರನ್ನು ಕೆಣಕಿದಿರು.
ನಮ್ಮದು ಪ್ರಾದೇಶಿಕ ಪಕ್ಷ.ಆದಾಯ ತೆರಿಗೆ ಕಟ್ಟುತ್ತಿದ್ದೇವೆ. ಎಲ್ಲಾ ರೀತಿಯ ಲೆಕ್ಕಪತ್ರಗಳನ್ನು ಇಟ್ಟಿದ್ದೇವೆ. ನೀವು ರಾಜಕೀಯ ಪಕ್ಷವಾಗಿ ಯಾವ ರೀತಿ ಮಾಡುತ್ತಿರೋ, ನಾವೂ ಅದನ್ನೇ ಮಾಡುತ್ತೇವೆ. ನಾನೇನು ವೈಯಕ್ತಿಕವಾಗಿ ಹಣ ಕೇಳಿಲ್ಲ. ಅದಕ್ಕೂ-ಇದಕ್ಕೂ ಹೋಲಿಕೆ ಮಾಡುವುದು ಅನಗತ್ಯ.ಈ ವಿಚಾರ ಪ್ರಸ್ತಾಪಿಸಿರುವುದೇ ಅಪ್ರಸ್ತುತ.2014ರಲ್ಲಿ ಘಟನೆ ನಡೆದಾಗ ಇದೇ ವಿಧಾನಸಭೆಯ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದೆ.ತನಿಖೆ ಮಾಡಿ ಎಂದು ಒತಾಯಿಸಿದ್ದೆ. ಆಗ ನೀವೂ ಕೂಡ ಪ್ರತಿಪಕ್ಷದ ಸ್ಥಾನದಲ್ಲಿ ನನ್ನ ಪಕ್ಕದಲ್ಲೇ ಇದ್ದೀರಿ.ಅಷ್ಟು ವರ್ಷದಿಂದ ಏಕೆ ಸುಮ್ಮನಿದ್ದಿರಿ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.