ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್‍ವೊಂದರಲ್ಲಿ ಅಗ್ನಿ ದುರಂತ: ಘಟನೆಯಲ್ಲಿ 17 ಜನರ ಸಾವು

ನವದೆಹಲಿ, ಫೆ.12- ರಾಜಧಾನಿ ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್ ಅರ್ಪಿತ್ ಪ್ಯಾಲೇಸ್‍ನಲ್ಲಿ ಇಂದು ನಸುಕಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಕೆಲವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಹೋಟೆಲ್‍ನಲ್ಲಿ ಕೇರಳದ 10 ಜನರ ಕುಟುಂಬ ಕೂಡ ವಾಸ್ತವ್ಯ ಹೂಡಿತ್ತು. ಇವರಲ್ಲಿ ಒಬ್ಬರು ಮಹಿಳೆ ಹಾಗೂ ಮಗು ಸೇರಿ 17 ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಹಲವರು ಬೆಂಕಿಗೆ ಆಹುತಿಯಾಗಿದ್ದರೆ, ಕೆಲವರು ಕಟ್ಟಡದ ಮೇಲಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಇದು ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತವಾಗಿದೆ.

ಅಗ್ನಿಯ ಕೆನ್ನಾಲಿಗೆ ಹೋಟೆಲ್‍ನ 40 ಕೊಠಡಿಗಳಿಗೂ ವ್ಯಾಪಿಸಿರುವ ಕಾರಣ ಸಾವು-ನೋವು ಹೆಚ್ಚಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ 4.30ರಲ್ಲಿ ಅಗ್ನಿ ಅವಘಡದ ಸುದ್ದಿ ಕೇಳಿ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡು ಬೆಳಗ್ಗೆ 7 ರ ಸುಮಾರಿಗೆ ಬೆಂಕಿಯ ಕೆನ್ನಾಲಿಗೆಯನ್ನು ನಂದಿಸಿದರು. 26 ಅಗ್ನಿಶಾಮಕ ಪಡೆ ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದವು.

ಈಗಾಗಲೆ 35 ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಶೋಚನೀಯವಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಳಗ್ಗೆ 4.30ರ ಸುಮಾರಿಗೆ ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದ್ದು ದುರ್ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗತ್ಯ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇತ್ತೀಚಿನ ದಿನಗಳು ಅಗ್ನಿ ಆಕಸ್ಮಿಕಗಳು ಮರು ಕಳಿಸುತ್ತಿದ್ದು ಸಾವು-ನೋವು ಸಂಭವಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ