ನಗರದ ಸಮಗ್ರ ಅಭಿವೃದ್ಧಿಗೆ 8015 ಕೋಟಿ ಬಿಡುಗಡೆ ಡಿಸಿಎಂ. ಜಿ.ಪರಮೇಶ್ವರ್

ಬೆಂಗಳೂರು, ಫೆ.9- ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ 8015 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.ಇದರ ಜತೆಗೆ 1500 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಬೀದಿ ದೀಪಗಳನ್ನು ಎಲ್‍ಇಡಿ ದೀಪಗಳನ್ನಾಗಿ ಪರಿವರ್ತಿಸುವುದರ ಜತೆಗೆ ಆದಷ್ಟು ಬೇಗ ಸ್ಮಾರ್ಟ್ ಪಾರ್ಕಿಂಗ್ ನೀತಿ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಗರದ 198 ರಸ್ತೆಗಳನ್ನೂ ವೈಟ್‍ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮುಂದಾಗಿದ್ದು, ಈ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬಿಬಿಎಂಪಿಯ 198 ವಾರ್ಡ್‍ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡ ಡಿಸಿಎಂ ಅವರು ಸೌಕರ್ಯ ಕೊರತೆ ಇರುವ ವಾರ್ಡ್‍ಗಳ ಅಭಿವೃದ್ಧಿಗೆ ಬಿಬಿಎಂಪಿ ಮುಂದಾಗಬೇಕು ಎಂದು ಕರೆ ನೀಡಿದರು.

ಸ್ಥಳೀಯ ಶಾಸಕರಾದ ವಿ.ಸೋಮಣ್ಣ ಅವರು ಈ ಹಿಂದೆ ನಮ್ಮ ಪಕ್ಷದಲ್ಲೇ ಇದ್ದರು.ಆದರೆ, ರಾತ್ರೋರಾತ್ರಿ ಪಕ್ಷಾಂತರ ಮಾಡಿ ಬಿಜೆಪಿಗೆ ಹೋಗಿದ್ದಾರೆ.ಅವರು ಎಲ್ಲೇ ಇರಲಿ ಸುಮ್ಮನೆ ಕೂರೋದಿಲ್ಲ. ಉತ್ತಮ ಕೆಲಸ ಮಾಡುತ್ತಾರೆ. ಅವರಿಗೆ ಈಗ ತಾವು ಮಾಡಿದ ತಪ್ಪಿನ ಜ್ಞಾನೋದಯವಾಗಿದೆ ಎಂದು ಪರಮೇಶ್ವರ್ ಹೇಳಿದರು.

ಪರಮೇಶ್ವರ್ ಸಿಎಂ ಆಗಲಿ: ಡಿಸಿಎಂ ಪರಮೇಶ್ವರ್ ಅವರು ಸಿಎಂ ಆಗಲಿ ಎಂದು ಶಾಸಕ ಸೋಮಣ್ಣ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಪಕ್ಷದ ಪರಮೇಶ್ವರ್ ಅವರು ಸಿಎಂ ಆಗಲಿ ಎಂದು ನಾನು ಹೇಳಿರುವುದರಿಂದ ನನಗೂ ಯಡಿಯೂರಪ್ಪ ಅವರಿಗೂ ಗಲಾಟೆಯಾಗಿದೆ ಎಂದು ಗುಲ್ಲೆಬ್ಬಿಸಬೇಡಿ ಎಂದು ಸೋಮಣ್ಣ ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು.

ಏಕೆಂದರೆ, ಈ ಹಿಂದೆ ನಾನು ಶ್ರೀರಾಮುಲು ಅವರು ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.ನನ್ನ ಪರಮೇಶ್ವರ್ ಸ್ನೇಹ ಇಂದು ನಿನ್ನೆಯದಲ್ಲ. ನಮ್ಮಿಬ್ಬರ ನಡುವೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಅವರು ಸಿಎಂ ಆಗಲಿ ಎಂದು ಹೇಳಿದ್ದೇನಷ್ಟೆ ಎಂದು ಸೋಮಣ್ಣ ಹೇಳಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಅಭಿವೃದ್ಧಿ ಕಾರ್ಯ ಮಾಡುವುದರಲ್ಲಿ ಸೋಮಣ್ಣ ಅವರನ್ನು ಮೀರಿಸುವವರು ಯಾರೂ ಇಲ್ಲ. ಯಾವುದೇ ಪಕ್ಷ, ಜಾತಿ-ಮತ ನೋಡದೆ ಕೆಲಸ ಮಾಡುವವರನ್ನು ಬೆಳೆಸುವ ಗುಣ ಸೋಮಣ್ಣ ಅವರಲ್ಲಿದೆ ಎಂದು ಗುಣಗಾನ ಮಾಡಿದರು.

ನನಗೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ನಾನು ಸಚಿವನಾಗಿದ್ದಾಗ ಈ ಕಾಮಗಾರಿಗಳಿಗೆ ಸಪೋರ್ಟ್ ಮಾಡಿದ್ದೆ ಎಂಬುದನ್ನು ನೆನಪು ಮಾಡಿಕೊಂಡು ನನ್ನನ್ನು ಸೋಮಣ್ಣ ಕರೆದಿದ್ದಾರೆ ಎಂದು ರೇವಣ್ಣ ಸಮಜಾಯಿಷಿ ನೀಡಿದರು.

ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಮಾಜಿ ಮೇಯರ್ ಶಾಂತಕುಮಾರಿ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಬಿಎಂಪಿ ಸದಸ್ಯರಾದ ಉಮೇಶ್‍ಶೆಟ್ಟಿ, ಶಿಲ್ಪಾ ಶ್ರೀಧರ್, ಮೋಹನ್‍ಕುಮಾರ್, ಬಿಬಿಎಂಪಿ ಮಾಜಿ ಸದಸ್ಯ ವಾಗೀಶ್ ಮತ್ತಿತರ ಸ್ಥಳೀಯ ಮುಖಂಡರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ