ರಾಜ್ಯ ರಾಜಕೀಯದಲ್ಲಿ ತೀವ್ರಗೊಂಡಿರುವ ಆಡಿಯೋ ಸಮರ

ಬೆಂಗಳೂರು, ಫೆ.9- ರಾಜ್ಯ ರಾಜಕೀಯದಲ್ಲೀಗ ಆಡಿಯೋ ಸಮರ ತೀವ್ರಗೊಂಡಿದೆ.ಯಡಿಯೂರಪ್ಪನವರ ಆಪರೇಷನ್ ಕಮಲದ ಆಡಿಯೋವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಸಿಎಂ ವಿರುದ್ಧದ ಆಡಿಯೋ ಬಿಡುಗಡೆ ಮಾಡಲು ಮುಂದಾಗಿರುವುದರಿಂದ ಸೋಮವಾರದ ಕಲಾಪ ಕಾವೇರಲಿದೆ.

ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಪ್ರಕರಣ ವಿಧಾನಸೌಧದಲ್ಲಿ ಸೋಮವಾರ ಚರ್ಚೆಗೆ ಬರಲಿದ್ದು, ಭಾರೀ ಕೋಲಾಹಲ ಉಂಟುಮಾಡುವ ಸಾಧ್ಯತೆ ಇದೆ.ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಜೆಡಿಎಸ್ ವಿರುದ್ಧದ ಆಡಿಯೋವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿನ್ನೆ ಆಡಿಯೋ ಬಿಡುಗಡೆ ಮಾಡಿ ಬಿಜೆಪಿ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.ಆಡಿಯೋದಲ್ಲಿ ಸ್ಪೀಕರ್ ರಮೇಶ್‍ಕುಮಾರ್ ಅವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಯ ಪ್ರಮುಖ ವಿಷಯವಾಗಿದೆ.ಸೋಮವಾರ ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ ರಮೇಶ್‍ಕುಮಾರ್ ಅವರು ತಾವೇ ಖುದ್ದಾಗಿ ವಿಷಯ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ.

ಅತ್ತ ಆಡಳಿತ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಆಡಿಯೋ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿವೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಆಡಿಯೋ ಸಾಕ್ಷಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಒಂದು ವೇಳೆ ವಿಡಿಯೋ ಬಿಡುಗಡೆಯಾದರೆ ಸೋಮವಾರ ಆ ವಿಷಯವೂ ಗಂಭೀರ ಚರ್ಚೆಯಾಗಲಿದೆ. ಆಪರೇಷನ್ ಕಮಲದ ಆರೋಪ-ಪ್ರತ್ಯಾರೋಪಗಳು ಸೋಮವಾರದ ಕಲಾಪವನ್ನು ಕಾವೇರಿಸುವ ನಿರೀಕ್ಷೆಗಳಿವೆ.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಬಿಜೆಪಿ ವಿರುದ್ಧ ಬಿಡುಗಡೆ ಮಾಡಿರುವ ಆಡಿಯೋ ಕುರಿತು ತನಿಖೆಗೆ ಆಗ್ರಹಿಸಿದರೆ, ಬಿಜೆಪಿ ತನ್ನ ಬಳಿ ಇರುವ ಆಡಿಯೋ ಸಾಕ್ಷ್ಯವನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುವ ಸಾಧ್ಯತೆ ಇದೆ. ಹೀಗಾಗಿ ಆಪರೇಷನ್ ಕಮಲದ ಆಡಿಯೋ-ವಿಡಿಯೋ ಬಾಂಬ್‍ಗಳು ಸೋಮವಾರ ವಿಧಾನಮಂಡಲದ ಕಲಾಪದಲ್ಲಿ ಸ್ಫೋಟಿಸುವ ನಿರೀಕ್ಷೆಗಳಿದ್ದು, ಇದು ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ವ್ಯಕ್ತವಾಗಿದೆ.

ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಯಾಗಬೇಕಿದೆ ಹಾಗೂ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಕುರಿತು ಚರ್ಚೆಯಾಗಬೇಕಿದೆ. ಆದರೆ ಇವೆಲ್ಲವನ್ನೂ ಬದಿಗಿಟ್ಟು ಆಪರೇಷನ್ ಕಮಲದ ಸಾಕ್ಷ್ಯಗಳು ರಾಜಕೀಯ ಮೇಲಾಟಗಳಿಗೆ ಸದನದ ಕಲಾಪ ಬಲಿಯಾಗಬಹುದೇ ಎಂಬ ಆತಂಕ ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ