ಬೆಂಗಳೂರು, ಫೆ.8- ಅನಿರೀಕ್ಷಿತ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಅಭಯ ಹಸ್ತ ನೀಡಲು 500 ಕೋಟಿ ವೆಚ್ಚದಲ್ಲಿ ರೈತ ಕಣಜ ಯೋಜನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ 2019-20ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಅನಿರೀಕ್ಷಿತ ಬೆಲೆ ಕುಸಿತ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ನಾನು ರೈತರ ಜತೆ ಚರ್ಚೆ ಮಾಡಿದ್ದಾಗ ಈ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ 12 ಅನುಸೂಚಿತ ಬೆಳೆಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುವುದು.
ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾದಾಗ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆ ಬೆಲೆ ಕಡಿಮೆ ಇದ್ದರೆ ಸರ್ಕಾರ ಮಧ್ಯ ಪ್ರವೇಶ ಮಾಡಲಿದೆ. ಮಾರುಕಟ್ಟೆ ಬೆಲೆ ಮತ್ತು ಮಾರ್ಗಸೂಚಿ ಬೆಲೆ ನಡುವಿನ ವ್ಯತ್ಯಾಸದ ಹಣವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ಪಾವತಿ ಮಾಡಲಾಗುತ್ತದೆ ಎಂದ ಅವರು, ಇದಕ್ಕಾಗಿ 50 ಕೋಟಿ ರೂ.ಗಳನ್ನು ನಿಗದಿಪಡಿಸಿರುವುದಾಗಿ ತಿಳಿಸಿದರು.
ಸಿರಿಧಾನ್ಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಲಾಭದಾಯಕ ಬೆಂಬಲ ಬೆಲೆ ಘೋಷಿಸಲಾಗುತ್ತಿದೆ. ಆಫ್ಕಾಮ್ಸ್, ನಂದಿನಿ ಮತ್ತಿತರ ಮಾರಾಟ ಕೇಂದ್ರಗಳ ಮೂಲಕ ಸಿರಿಧಾನ್ಯಗಳನ್ನು ಮಾರಾಟ ಮಾಡಲಾಗುತ್ತದೆ. ಇದರ ಉತ್ತೇಜನಕ್ಕೆ 10 ಕೋಟಿ ಅನುದಾನ ಒದಗಿಸಲಾಗಿದೆ.
ಎಪಿಎಂಸಿಯಲ್ಲಿ ಬೆಲೆ ಕುಸಿದಾಗ ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು ಕೃಷಿ ಉತ್ಪನ್ನಗಳ ಸಂಗ್ರಹಗಾರಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯದ ಗದಗ, ಹಾವೇರಿ, ಅಣ್ಣಿಗೇರಿ ಮತ್ತಿತರ ಭಾಗಗಳಲ್ಲಿ 110 ಕೋಟಿ ವೆಚ್ಚದಲ್ಲಿ ಕೃಷಿ ಉತ್ಪನ್ನ ಸಂಗ್ರಹಗಾರಗಳನ್ನು ಆರಂಭಿಸುವುದಾಗಿ ತಿಳಿಸಿದರು.
ನೂರು ಎಕರೆ ಭೂ ಪ್ರದೇಶ ಮತ್ತು ನೂರು ರೈತರನ್ನೊಳಗೊಂಡಂತೆ ಸಂಯುಕ್ತ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 5 ಕೋಟಿ ರೂ. ಮೀಸಲಿಡಲಾಗಿದೆ. ಸ್ವಯಂ ಚಾಲಿತ ಹಾಲು ಸಂಗ್ರಹಣಾ ಯಂತ್ರಗಳನ್ನು 500 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸ್ಥಾಪಿಸಲು 5 ಕೋಟಿ ಹಣ ಮೀಸಲಿಟಿದ್ದೇವೆ ಎಂದು ಹೇಳಿದರು.