ಬೆಂಗಳೂರು, ಫೆ.7-ಸಮ್ಮಿಶ್ರ ಸರ್ಕಾರಕ್ಕೆ ಬಹುಮತದ ಕೊರತೆ ಇದೆ ಎಂದು ಆರೋಪಿಸಿ ಬಿಜೆಪಿ ಇಂದು ಕೂಡ ಉಭಯ ಸದನಗಳಲ್ಲಿ ಧರಣಿ ನಡೆಸಿಕಲಾಪಕ್ಕೆ ಅಡ್ಡಿಪಡಿಸಿದ್ದರಿಂದಉಂಟಾದ ಕೋಲಾಹಲ-ಗದ್ದಲದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ನಾಳೆಗೆ ಮುಂದೂಡಲ್ಪಟ್ಟರೆ, ವಿಧಾನಪರಿಷತ್ ಕಲಾಪ ಮಧ್ಯಾಹ್ನದವರೆಗೂ ಮುಂದೂಡಲಾಯಿತು.
ಇಂದು ಬೆಳಗ್ಗೆ ವಿಧಾನಸಭೆಯಲ್ಲಿ ಅರ್ಧ ಗಂಟೆ ತಡವಾಗಿ ಕಲಾಪ ಆರಂಭವಾಯಿತಾದರೂ ನಿನ್ನೆಯಿಂದ ಯಡಿಯೂರಪ್ಪ ನೇತೃತ್ವದಲ್ಲಿ ಆರಂಭಿಸಿದ್ದ ಧರಣಿಯನ್ನು ಬಿಜೆಪಿ ಸದಸ್ಯರು ಇಂದೂ ಮುಂದುವರೆಸಿದರು.
ವಿಧಾನಪರಿಷತ್ನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಧರಣಿ ನಡೆಸಿದ್ದರಿಂದ ಅಲ್ಲಿಯೂ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು.
ವಿಧಾನಸಭೆ ವರದಿ: ನಿನ್ನೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಆರಂಭಿಸಿದಾಗಲೇ ಬಿಜೆಪಿ, ಸಭಾಧ್ಯಕ್ಷರ ಮುಂದಿರುವ ಸದನದ ಬಾವಿಗಿಳಿದು ಧರಣಿ ಆರಂಭಿಸಿತ್ತು. ಆ ಹೋರಾಟವನ್ನು ಇಂದೂ ಕಲಾಪದ ಆರಂಭದಲ್ಲೇ ಬಿಜೆಪಿ ಮುಂದುವರೆಸಿದ್ದರಿಂದ ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಹುಮತ ಇಲ್ಲ. ಬಹುಮತ ಇಲ್ಲದ ಸರ್ಕಾರಕ್ಕೆ ಧಿಕ್ಕಾರ. ಸಿಎಂ ಗೋ ಬ್ಯಾಕ್, ಅಧಿಕಾರ ಬಿಟ್ಟು ಕೆಳಗೆ ಇಳಿಯಿರಿ ಎಂಬೆಲ್ಲ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಕಲಾಪದಲ್ಲಿ ಧರಣಿ ನಡೆಸಿ ಗದ್ದಲ ಎಬ್ಬಿಸಿತು.
ಇದಕ್ಕೆ ಆಡಳಿತ ಪಕ್ಷವೂ ಕೂಡ ತಿರುಗೇಟು ನೀಡಿದ್ದು, ನಿಮಗೆ ಅಷ್ಟು ಧೈರ್ಯ ಇದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತನ್ನಿ ಎಂದು ಸಚಿವರಾದ ಜಮೀರ್ ಅಹಮ್ಮದ್ ಖಾನ್, ಕೃಷ್ಣಭೆರೇಗೌಡ, ಪ್ರಿಯಾಂಕಾ ಖರ್ಗೆ ಅವರುಗಳು ಪ್ರತಿಪಕ್ಷ ಬಿಜೆಪಿಯವರಿಗೆ ಸವಾಲು ಹಾಕಿದರು.
ಕಾಂಗ್ರೆಸ್ನ ಕೆಲ ಶಾಸಕರೂ ಕೂಡ ಇದಕ್ಕೆ ಧ್ವನಿಗೂಡಿಸಿದರು.ಬಿಜೆಪಿಯ ಧರಣಿ ನಡುವೆಯೇ ಸಭಾಧ್ಯಕ್ಷರು ಕಾಗದ ಪತ್ರಗಳ ಮಂಡನೆ ಕಲಾಪವನ್ನು ಕೈಗೆತ್ತಿಕೊಂಡರು.ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಜಿ.ಟಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಡಿ.ಸಿ.ತಮ್ಮಣ್ಣ, ಕೃಷ್ಣಭೆರೇಗೌಡ ಅವರು ತಮ್ಮ ಹೆಸರಿನ ಮುಂದಿರುವ ಕಾಗದ ಪತ್ರಗಳನ್ನು ಮಂಡಿಸಿದರು.
ಸದನದಲ್ಲಿ ಹಾಜರಿಲ್ಲದ ಸಚಿವರಾದ ಕೆ.ಜೆ.ಜಾರ್ಜ್, ಜಯಮಾಲಾ, ಎಂ.ಬಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್ ಅವರ ಹೆಸರಿನ ಕಾಗದ ಪತ್ರಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಮಂಡಿಸಿದರು.
ನಂತರ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಇಬ್ಬರು ಸದಸ್ಯರನ್ನು ಚುನಾಯಿಸುವ ಚುನಾವಣಾ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಮಂಡಿಸಿದರು.
ಇಂದಿನ ಕಲಾಪವಾಗಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಸ್ಪೀಕರ್ ರಮೇಶ್ಕುಮಾರ್ ಅನುಮತಿ ನೀಡಿದರು.
ಕಾಂಗ್ರೆಸ್ ಶಾಸಕರಾದ ಈಶ್ವರ್ ಖಂಡ್ರೆ ಬದಲಾಗಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ವಂದನಾ ನಿರ್ಣಯವನ್ನು ಮಂಡಿಸಿದರು.ಜೆಡಿಎಸ್ನ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ ಅದಕ್ಕೆ ಅನುಮೋದನೆ ನೀಡಿದರು.
ವಂದನಾ ನಿರ್ಣಯ ಮಂಡಿಸಿದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಮಾತನಾರಂಭಿಸಿ, 2019ರ ಸಾಲಿನ ಮಳೆಗಾಲದಲ್ಲಿ 652 ಲಕ್ಷ ಸಸಿ ನೆಟ್ಟು, ರಾಜ್ಯವನ್ನು ಹಸಿರೀಕರಣ ಮಾಡುವ ನಿರ್ಣಯವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ.ಅದೇ ರೀತಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 666 ಹುದ್ದೆಗಳನ್ನು ನೇಮಕಾತಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಗದ್ದಲ ಧರಣಿ ಮುಂದುವರೆದಾಗ ಮಧ್ಯಪ್ರವೇಶಿಸಿದ ಆಗ ಜೆಡಿಎಸ್ನ ಸಚಿವರಾದ ನಾಡಗೌಡ ಅವರು, ನೀವು ಬಹುಮತ ಇಲ್ಲ ಎಂದು ಹೇಳಿದರೆ ಆಗಲ್ಲ, ಅವಿಶ್ವಾಸ ನಿರ್ಣಯ ಮಂಡಿಸಿ ಅದನ್ನು ಸಾಬೀತು ಮಾಡಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.
ಸಚಿವ ಕೃಷ್ಣಭೆರೇಗೌಡ ಅವರು ನೀರಿಲ್ಲದ ಬಾವಿಯಲ್ಲಿ ಬಿದ್ದು ಏಕೆ ಒದ್ದಾಡುತ್ತೀರ. ಸದನದಲ್ಲಿ ಚರ್ಚೆಗೆ ಬ ನ್ನಿ ಇಲ್ಲವಾದರೆ ಅವಿಶ್ವಾಸ ನಿರ್ಣಯ ತನ್ನಿ ಎಂದು ಏರಿದ ದನಿಯಲ್ಲೇ ಹೇಳಿದರು.
ಬಿಜೆಪಿ ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ಅವರು, ಸಂಸದೀಯ ವ್ಯವಸ್ಥೆಯಲ್ಲಿ ಇದೊಂದು ಹೊಸ ಅಧ್ಯಾಯ.ಕಾರಣ ಇಲ್ಲದೆ, ಧರಣಿ ನಡೆಯುತ್ತಿದೆ. ಹಾಗಾಗಿ ಸದನವನ್ನು 10 ನಿಮಿಷ ಮುಂದೂಡುತ್ತಿದ್ದೇನೆ ಎಂದು ಕಲಾಪ ಮುಂದೂಡಿದರು.
12.25ಕ್ಕೆ ಮತ್ತೆ ಸದನ ಸಮಾವೇಶಗೊಂಡಾಗಲೂ ಬಿಜೆಪಿ ತನ್ನ ಧರಣಿ ಮುಂದುವರೆಸಿತ್ತು.ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು, ಸಚಿವರು ಕೂಡ ಧಿಕ್ಕಾರ, ಪ್ರತಿ ಘೋಷಣೆಗಳನ್ನು ಕೂಗಿದ್ದರಿಂದ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಸದನ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಮತ್ತೆ ನಾಳೆ ಮಧ್ಯಾಹ್ನ 12.30ಕ್ಕೆ ಮುಂದೂಡಿದರು. ಇದರಿಂದಾಗಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯದೆ ಇಡೀ ದಿನ ವ್ಯರ್ಥವಾಯಿತು.
ವಿಧಾನಪರಿಷತ್ ವರದಿ: ಮೇಲ್ಮನೆಯಲ್ಲಿ ಕಾವೇರಿದ ಪ್ರತಿಭಟನೆ, ಪ್ರತಿಪಕ್ಷ ಬಿಜೆಪಿ ಸದಸ್ಯರಿಂದ ಮುಂದುವರಿದ ಧರಣಿ, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪಗಳ ಬಿತ್ತಿಪತ್ರ ಪ್ರದರ್ಶನ, ಗದ್ದಲ-ಕೋಲಾಹಲ ಉಂಟಾಗಿ ವಿಧಾನ ಪರಿಷತ್ ಕಲಾಪ ಬಲಿಯಾಯಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ, ಪ್ರಶ್ನೋತ್ತರ ಕಲಾಪ, ಸರ್ಕಾರಿ ಕಲಾಪಗಳು ನಡೆಯಬೇಕಾಗಿದ್ದ ವಿಧಾನ ಪರಿಷತ್ನ ಎರಡನೆ ದಿನದ ಅಧಿವೇಶನದಲ್ಲಿ ಇಂದು ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆ, ಆಡಳಿತ ಪಕ್ಷಗಳಿಂದಲೂ ಆರೋಪ-ಪ್ರತ್ಯಾರೋಪ ನಡೆದು ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.
ಬಹುಮತವಿಲ್ಲದ ಸರ್ಕಾರ ಕಲಾಪ ನಡೆಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಸದನದ ಬಾವಿಗಿಳಿದು ಪ್ರತಿಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದರು.
ಸಚಿವ ಪುಟ್ಟರಂಗಶೆಟ್ಟಿ ಅವರ ಭ್ರಷ್ಟಾಚಾರ, ವಕ್ಫ್ ಮಂಡಳಿಯಿಂದ ಭೂ ಕಬಳಿಕೆ, ಹಿಂದೂ ವಿರೋಧಿ ಸರ್ಕಾರ, ವರ್ಗಾವಣೆ ಸರ್ಕಾರ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಬಹುಮತವಿಲ್ಲದ ಈ ಸರ್ಕಾರ ತೊಲಗಲಿ ಎಂದು ಘೋಷಣೆಗಳನ್ನು ಕೂಗಿದರು.ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಭ್ರಷ್ಟಾಚಾರವೇ ಬಿಜೆಪಿಯ ಮೂಲಮಂತ್ರ.ಅಮಿತ್ ಷಾ-ಮೋದಿ ಅವರು ಜನತಂತ್ರ ವ್ಯವಸ್ಥೆಯನ್ನು ನಾಶಮಾಡುತ್ತಿದ್ದಾರೆ. 50 ಕೋಟಿ ಆಮಿಷ, ಸಚಿವರ ಖರೀದಿ, ಶಾಸಕರ ಗಿರಿ, ಹಣ ಎಲ್ಲಿಂದ ಬರುತ್ತದೆ ಎಂಬ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಗದ್ದಲ-ಗಲಾಟೆ ನಡುವೆಯೇ ಸಭಾಪತಿ ಕೆ.ಪ್ರತಾಪ್ಚಂದ್ರಶೆಟ್ಟಿ ಅವರು ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಮಂಡಿಸುವಂತೆ ಸಚಿವರಿಗೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಸಭಾನಾಯಕರಾದ ಜಯಮಾಲಾ ಅವರು ಹಲವು ಸಚಿವರ ಹೆಸರಿನಲ್ಲಿದ್ದ ಕಾಗದ ಪತ್ರಗಳನ್ನು ಸಭೆ ಮುಂದೆ ಮಂಡಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮಂಡಿಸಿ ಮಾತನಾಡುವಂತೆ ಹಿರಿಯ ಸದಸ್ಯ ರೇವಣ್ಣ ಅವರಿಗೆ ಸೂಚಿಸಿದರು.
ಅದರನ್ವಯ ರೇವಣ್ಣ ಅವರು ಮಾತನಾಡಲು ಪ್ರಾರಂಭಿಸಿದಾಗ ಸದನದಲ್ಲಿ ಮತ್ತೆ ಗದ್ದಲ ಹೆಚ್ಚಾಯಿತು.ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಅವರು, ನೀವು ಯಾವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರಿ, ಕಾರಣ ಹೇಳಿ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರಕ್ಕೆ ಬಹುಮತವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಹುಮತ ಇಲ್ಲ ಎಂಬುದನ್ನು ಕೇಳಲು ಅದರದೇ ಆದ ವೇದಿಕೆಯಿದೆ.ಈ ರೀತಿ ಪ್ರತಿಭಟನೆ ಮಾಡಲು ಬರುವುದಿಲ್ಲ. ಇದು ಸಾಧುವೂ ಅಲ್ಲ, ಸದನ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಮನವಿಗೆ ಪ್ರತಿಭಟನಾನಿರತ ಸದಸ್ಯರು ಕಿವಿಗೊಡದೆ ಪ್ರತಿಭಟನೆ ಮುಂದುವರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.