ಮುಂಬೈನಲ್ಲಿ ಕಾಂಗ್ರೇಸ್‍ನ 11 ಶಾಸಕರು: ಮೈತ್ರಿ ಸರ್ಕಾರಕ್ಕೆ ಆತಂಕ

ಬೆಂಗಳೂರು, ಫೆ.7- ಕಾಂಗ್ರೆಸ್‍ನ 11 ಮಂದಿ ಶಾಸಕರು ಮುಂಬೈನ ಖಾಸಗಿ ಹೋಟೆಲ್‍ನಲ್ಲಿ ತಂಗಿರುವ ಮಾಹಿತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಹೊಸ ಸಂಕಟ ತಂದಿಟ್ಟಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರೊಂದಿಗೆ 11 ಮಂದಿ ಶಾಸಕರು ಮುಂಬೈನ ಹೋಟೆಲ್‍ನಲ್ಲಿ ತಂಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಬೆಳಗ್ಗೆಯಿಂದಲೂ ಬಿರುಸಿನ ಚಟುವಟಿಕೆಗಳು ನಡೆಸುತ್ತಿದೆ.ಇತ್ತ ಕುಮಾರಸ್ವಾಮಿ ಅವರು ಬಜೆಟ್ ತಯಾರಿ ನಡುವೆಯೂ ಆಪರೇಷನ್ ಕಮಲದ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದಾರೆ.

ಕಾಂಗ್ರೆಸ್‍ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ್ ಅವರು ಖುದ್ದಾಗಿ ಎಲ್ಲಾ ಶಾಸಕರನ್ನು ಸಂಪರ್ಕಿಸಿ ವಾಪಸ್ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.

ಕಾನೂನಿನ ಪ್ರಕಾರ ಶಾಸಕಾಂಗಸಭೆಯಿಂದ ಹೊರಗುಳಿದವರನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹ ಮಾಡಲು ಅವಕಾಶ ಇಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಿದಾಗ ಮಾತ್ರ ಅನರ್ಹ ವ್ಯಾಪ್ತಿಗೆ ಒಳಪಡುತ್ತದೆ.ಅದನ್ನು ಹೊರತುಪಡಿಸಿ ಹೊರಗಡೆ ನಡೆಸುವ ಯಾವುದೇ ಚಟುವಟಿಕೆಗಳನ್ನು ಆಧರಿಸಿ ದಿಢೀರ್ ಅನರ್ಹಗೊಳಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಪಕ್ಷದಿಂದ ಅಮಾನತುಪಡಿಸಬಹುದು ಎಂಬ ಮಾಹಿತಿ ಇದೆ.

ಹೀಗಾಗಿ ಬಿಜೆಪಿ ಬಹಿರಂಗವಾಗಿಯೇ ಶಾಸಕರ ಕ್ರೂಢೀಕರಣಕ್ಕೆ ಮುಂದಾಗಿದ್ದು, ಈಗಾಗಲೇ 11 ಮಂದಿ ಶಾಸಕರನ್ನು ಮುಂಬೈ ಹೋಟೆಲ್‍ನಲ್ಲಿ ಇರಿಸಲಾಗಿದೆ.ಇನ್ನೂ ಐದಾರು ಮಂದಿ ಶಾಸಕರು ನಾಳೆಯ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಮುಂಬೈನತ್ತ ಮುಖ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶತಾಯ-ಗತಾಯ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ನಡೆಸುತ್ತಿರುವ ಪ್ರಯತ್ನಗಳು ಈತನಕ ಫಲ ಕೊಟ್ಟಿಲ್ಲ.

ಇದರಿಂದ ಆತಂಕಗೊಂಡಿರುವ ಉಭಯ ಪಕ್ಷಗಳ ಮುಖಂಡರು, ಇಂದು ವಿಧಾನಸಭೆಯ ಮೊಗಸಾಲೆಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಹೇಗಾದರೂ ಮಾಡಿ ಅತೃಪ್ತ ಶಾಸಕರನ್ನು ಕರೆತಂದು ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ್‍ನಲ್ಲೂ ತಳಮಳ:
ಈ ಬೆಳವಣಿಗೆಗಳ ನಡುವೆ ಜೆಡಿಎಸ್‍ನಲ್ಲೂ ಕೆಲವು ಅತೃಪ್ತ ಶಾಸಕರು ಕೈ ಕೊಡಬಹುದು ಎಂಬ ಭೀತಿ ಎದುರಾಗಿದೆ. ಈವರೆಗೂ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಮಾತ್ರ ಜೆಡಿಎಸ್‍ನಿಂದ ದೂರ ಸರಿದು ಅತೃಪ್ತರ ಬಣ ಸೇರಿಕೊಂಡಿದ್ದರು.

ಇಂದು ಇನ್ನೂ ಎರಡರಿಂದ ಮೂರು ಮಂದಿ ಶಾಸಕರು ಜೆಡಿಎಸ್‍ನಿಂದ ದೂರ ಸರಿದು ಬಿಜೆಪಿ ಕಡೆ ಮುಖ ಮಾಡಿರುವುದು ದಳಪತಿಗಳಲ್ಲಿ ತಲ್ಲಣ ಉಂಟು ಮಾಡಿದೆ.

ಮೂಲಗಳ ಪ್ರಕಾರ ಜೆಡಿಎಸ್‍ನಿಂದ ಮೂರರಿಂದ ನಾಲ್ಕು ಮಂದಿ ಶಾಸಕರು ಯಾವುದೇ ಕ್ಷಣದಲ್ಲಾದರೂ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ವಿಧಾನಸೌದದಲ್ಲಿ ಕೇಳಿ ಬರುತ್ತಿದೆ.
ತುಮಕೂರು ಹಾಗೂ ಉತ್ತರ ಕರ್ನಾಟಕ ಭಾಗದ ಇಬ್ಬರು ಶಾಸಕರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಜೆಡಿಎಸ್‍ನಿಂದ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಬಂಡಪ್ಪ ಕಾಶಂಪುರ್ ಹೆಗಲಿಗೆ ಜವಾಬ್ದಾರಿ ಹೊರಿಸಿದ್ದಾರೆ. ಆದರೆ, ನಾರಾಯಣಗೌಡ ಮತ್ತಿತರ ಶಾಸಕರು ಇದುವರೆಗೂ ಎಲ್ಲಿದ್ದಾರೆ, ಯಾರ ಜತೆ ಇದ್ದಾರೆ, ಅವರ ಮುಂದಿನ ನಡವಳಿಕೆಗಳ ಬಗ್ಗೆ ಗುಟ್ಟು ಬಿಟ್ಟುಕೊಡದೇ ಇರುವುದು ಜೆಡಿಎಸ್‍ನಲ್ಲೂ ಆತಂಕ ತಂದಿದೆ.

ನಾಳೆ ಅತೃಪ್ತರ ರಾಜೀನಾಮೆ..?

ಶತಾಯಗತಾಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಪ್ರತಿಪಕ್ಷ ಬಿಜೆಪಿ ನಾಳೆ ಅತೃಪ್ತ ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರಕ್ಕೆ ಖೆಡ್ಡ ತೋಡಲು ಸಜ್ಜಾಗಿದೆ.

ಹಣಕಾಸು ಖಾತೆಯನ್ನುಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನವೇ ಭಿನ್ನಮತೀಯ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಬಜೆಟ್ ಮಂಡನೆಯಾದರೆ ಸರ್ಕಾರಕ್ಕೆ ಕೀರ್ತಿ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ 7-10 ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಮುಂದಾಗಿದೆ.ನಾಳೆ ಈ ಸುದ್ದಿಯೇ ಪ್ರಧಾನವಾಗಿ ಬಜೆಟ್ ಸುದ್ದಿ ಹಳ್ಳ ಹಿಡಿಸುವ ಕಾರಣಕ್ಕಾಗಿ ಬಿಜೆಪಿ ಈ ತಂತ್ರ ರೂಪಿಸಿದೆ.

ಕಾಂಗ್ರೆಸ್‍ನ ಭಿನ್ನಮತೀಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಉಮೇಶ್ ಜಾಧವ್, ಬಿ.ಸಿ.ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಬಸವರಾಜ್ ದದ್ದಲ್ ಸೇರಿದಂತೆ ಮತ್ತತರರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯಕ್ಕೆ ಈ ಎಲ್ಲರೂ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಸಂಜೆ ಅಥವಾ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ವಿಧಾನಸಭೆಯ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಅಧಿಕೃತವಾಗಿ ಸಲ್ಲಿಸಲಿದ್ದಾರೆ.

ಬಂಡೆದ್ದಿರುವ ಭಿನ್ನಮತೀಯರನ್ನು ಹತ್ತಿಕ್ಕಲು ಕಾಂಗ್ರೆಸ್ ಅನರ್ಹತೆಯ ಬ್ರಹ್ಮಾಸ್ತ್ರವನ್ನು ಬಳಸಲು ಮುಂದಾಗಿರುವುದರಿಂದ ಅದಕ್ಕೂ ಮುನ್ನವೇ ಈ ಎಲ್ಲಾ ಶಾಸಕರು ರಾಜೀನಾಮೆ ಕೊಡಲಿದ್ದಾರೆ.

ಭಿನ್ನಮತೀಯ ಶಾಸಕರ ಜೊತೆ ಬಿಜೆಪಿಯ ಡಾ.ಅಶ್ವಥ್ ನಾರಾಯಣ, ಬಾಲಚಂದ್ರ ಜಾರಕಿಹೊಳಿ ಮತ್ತಿತರರು ಕೈ ಜೋಡಿಸಿದ್ದು, ಅವರನ್ನು ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ.
ಜೆಡಿಎಸ್‍ನ ಕೆಆರ್‍ಪೇಟೆ ಶಾಸಕ ನಾರಾಯಣಗೌಡ ಅವರ ಮುಂದಿನ ನಡೆ ಏನೆಂಬುದು ಇದುವರೆಗೂ ದೃಢಪಟ್ಟಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವರೋ ಇಲ್ಲವೇ ಪಕ್ಷದ ವರಿಷ್ಠರ ಮಾತಿಗೆ ಕಟ್ಟುಬಿದ್ದು ಹಿಂತಿರುಗುವರೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ನಾಳೆ ಭಿನ್ನಮತೀಯರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ. ಅಲ್ಲದೆ ಬಜೆಟ್‍ಗೂ ಯಾವುದೇ ಮಾನ್ಯತೆ ಸಿಗುವುದಿಲ್ಲ. ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಪ್ರತಿಪಕ್ಷ ಬಿಜೆಪಿ ಕುಮಾರಸ್ವಾಮಿಯವರ ರಾಜೀನಾಮೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ.

ನಿನ್ನೆ ಆರಂಭವಾದ ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್‍ನ ಏಳು ಮಂದಿ ಹಾಗೂ ಜೆಡಿಎಸ್‍ನ ಓರ್ವ ಶಾಸಕ ಗೈರು ಹಾಜರಾಗಿದ್ದರು. ಕಲಾಪಕ್ಕೆ ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಶಾಸಕ ಸ್ಥಾನವನ್ನು ಅನರ್ಹಗೊಳಿಸಲು ಸ್ಪೀಕರ್‍ಗೆ ಶಿಫಾರಸು ಮಾಡುವುದಾಗಿ ಹೇಳಿದ್ದರೂ ಭಿನ್ನಮತೀಯರು ಮಾತ್ರ ಕ್ಯಾರೆ ಎಂದಿರಲಿಲ್ಲ.

ಈ ಶಾಸಕರ ನಡೆ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವನ್ನು ತೀರ್ಮಾನಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ