ಕಾಂಗ್ರೇಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಹಿನ್ನಲೆ:ಸಿ.ಎಂ.ಕುಮಾರಸ್ವಾಮಿ ಮತ್ತು ಸಚಿವ ಡಿಕೆ.ಶಿವಕುಮಾರ್ ಮಹತ್ವದ ಮಾತುಕತೆ

 

ಬೆಂಗಳೂರು, ಫೆ.7- ಕಾಂಗ್ರೆಸ್‍ನ ಆರು ಮಂದಿ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅತೃಪ್ತರನ್ನು ವಾಪಸ್ ಕರೆ ತರುವ ನಿಟ್ಟಿನಲ್ಲಿ ವಿಧಾನಸಭೆ ಸಭಾಂಗಣದಲ್ಲಿಂದು ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದರು.

ನಿನ್ನೆ ಎರಡೂ ಪಕ್ಷದ ಶಾಸಕರಿಗೆ ಔತಣ ಕೂಟ ಏರ್ಪಡಿಸಲಾಗಿತ್ತಾದರೂ ಕೆಲವರು ಅಲ್ಲಿಗೂ ಗೈರು ಹಾಜರಾಗಿದ್ದರು. ಅತೃಪ್ತರನ್ನು ಸೆಳೆಯುವ ನಿಟ್ಟಿನಲ್ಲಿ ಇಂದು ವಿಧಾನಸಭೆ ಕಲಾಪ ಮುಂದೂಡಿದ ಬಳಿಕ ಸಭಾಂಗಣದಲ್ಲೇ ಮುಖ್ಯಮಂತ್ರಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ರೇವಣ್ಣ ಅವರೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರತಾಪ್‍ಗೌಡ ಪಾಟೀಲ್ ಮತ್ತು ಭೀಮಾನಾಯಕ್ ಅವರನ್ನು ಕರೆಸಿ ಮಾತುಕತೆ ನಡೆಸಿದರಲ್ಲದೆ, ಬಸವರಾಜ್ ಗದ್ದಲ್ ಅವರೊಂದಿಗೂ ಚರ್ಚಿಸಿದರು.
ನಿನ್ನೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಾಪ್‍ಗೌಡ ಪಾಟೀಲ್ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಲು ಮುಂದಾಗಿದ್ದು, ಇನ್ನಷ್ಟು ಅತೃಪ್ತರಿಗೆ ಬೇರೆ ಬೇರೆ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಮುಖ್ಯಮಂತ್ರಿಗಳು ಇಂದು ಸದನ ಮುಂದೂಡಿದ ಬಳಿಕ ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೂ ಮಾತುಕತೆ ನಡೆಸಿದ ಅವರು, ಇದಕ್ಕೂ ಮುನ್ನ ಸಚಿವರಾದ ಬಂಡಪ್ಪ ಕಾಶಂಪುರ್, ಡಿ.ಸಿ.ತಮ್ಮಣ್ಣ, ಶಿವಾನಂದ ಪಾಟೀಲ್, ವೆಂಕಟರಾವ್ ನಾಡಗೌಡ, ಶಾಸಕರಾದ ಲಿಂಗೇಶ್, ಭೀಮಾನಾಯಕ್ ಅವರೊಂದಿಗೆ ಔಪಚಾರಿಕ ಚರ್ಚೆ ನಡೆಸಿದರು.
ನಿನ್ನೆ ಹಾಗೂ ಇಂದು ಬಿಜೆಪಿಯವರು ವಿಧಾನಸಭೆಯಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ನಡುವೆ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಕೂಡ ದಟ್ಟವಾಗಿದೆ.ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಸಮಾಲೋಚನೆ ತೀವ್ರ ಕುತೂಹಲ ಕೆರಳಿಸಿದೆ.
ಕಾರ್ಯಕಲಾಪ ಮುಂದೂಡಿದ ನಂತರ ಬಿಜೆಪಿ ಹಾಗೂ ಆಡಳಿತ ಪಕ್ಷದ ಕೆಲ ಶಾಸಕರು ಪರಸ್ಪರ ಸಮಾಲೋಚನೆ ನಡೆಸಿದ್ದು ಅಚ್ಚರಿ ಮೂಡಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ