ಬಿಜೆಪಿಯವರ ಹೇಳಿಕೆಗಳಿಗೆ ಉತ್ತರ ಕೊಡುವದೇ ಅನವಶ್ಯಕ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.5-ನಗರದಲ್ಲಿಂದು ಮಾತನಾಡಿದ ಮುಖ್ಯಮಂತ್ರಿ ಮುಮಾರಸ್ವಾಮಿ ಅವರು, ನಾನು ಬಜೆಟ್ ಮಂಡಿಸುವುದು ಅನುಮಾನ ಎಂದು ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳಿಗೆ ಉತ್ತರ ಕೊಡುವುದೇ ಅನವಶ್ಯಕ. ಅವರ ಅಸಂಬಂಧಿತ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರು ಯಾವುದೋ ಲೋಕದಲ್ಲಿದ್ದಾರೆ. ಆ ಲೋಕದಲ್ಲಿಯೇ ಅವರು ವಿಹರಿಸಿಕೊಂಡಿರಲಿ. ನಾನು ನನ್ನ ಪಾಡಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಸರ್ಕಾರ ಸುಭದ್ರವಾಗಿದ್ದು, ವಿಶ್ವಾಸ ಮತ ಯಾಚನೆ ಮಾಡುವ ಅಗತ್ಯವಿಲ್ಲ. ಬಿಜೆಪಿಯವರು ಒಳ್ಳೆಯ ಕೆಲಸಕ್ಕೆ ಅಡ್ಡಿಪಡಿಸುವ ಪ್ರಯತ್ನವಾಗಿದೆ.ಉತ್ತಮ ಬಜೆಟ್ ಮಂಡನೆ ಮಾಡಿ ಒಳ್ಳೆಯ ಆಡಳಿತ ನೀಡಬೇಕೆಂದು ನಾನು ಪ್ರಯತ್ನಿಸುತ್ತಿದ್ದೇನೆ. ರಥ ಎಳೆಯುವಾಗ ಯಡೆಮಟ್ಟೆಯನ್ನು ಕೊಟ್ಟು ಅಡ್ಡಹಾಕುವಂತೆ ಬಿಜೆಪಿಯವರು ಒಳ್ಳೆ ಕೆಲಸ ಮಾಡಲು ಹೊರಟಿರುವ ನಮಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕೆಲವು ಬಿಜೆಪಿ ನಾಯಕರ ಹೇಳಿಕೆಗಳು ಅದಕ್ಕೆ ಪೂರಕವಾಗಿವೆ. ಆದರೆ, ಯಾವುದೂ ಫಲ ನೀಡುವುದಿಲ್ಲ. ನಾಳೆಯಿಂದ ಪರದೆ ತೆರೆಯಲಿದೆ.ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಲಭಿಸಲಿವೆ. ಕಾಂಗ್ರೆಸ್ ಶಾಸಕರು ಹಾಜರಾಗುತ್ತಾರೋ ಇಲ್ಲವೋ, ಅತೃಪ್ತರು ಬರುತ್ತಾರೋ ಇಲ್ಲವೋ ಎಂಬೆಲ್ಲಾ ಗೊಂದಲಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಮನವಿಗಳನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಸಾಧುವಾದಂತಹ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ