ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.5- ಕೇಂದ್ರ ಸರ್ಕಾರ ಐದು ಎಕರೆ ಒಳಗಿನ ಸಣ್ಣ ಮತ್ತು ಮಧ್ಯಮ ರೈತ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ನೀಡುವ ಕೃಷಿ ಸನ್ಮಾನ್ ಯೋಜನೆಯಿಂದ ಕರ್ನಾಟಕಕ್ಕೆ ಕೇವಲ 2098 ಕೋಟಿ ರೂ.ಮಾತ್ರ ನೆರವು ಸಿಗುತ್ತಿದೆ. ಆದರೆ, ರಾಜ್ಯ ಸರ್ಕಾರ ಕೃಷಿಕರ ಪಂಪ್ ಸೆಟ್‍ನ ವಿದ್ಯುತ್‍ಗಾಗಿ ವರ್ಷಕ್ಕೆ 11ಸಾವಿರ ಕೋಟಿ ಸಬ್ಸಿಡಿ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಬೆಸ್ಕಾಂ ಗ್ರಾಹಕರ ಅರಿವು ಸಮ್ಮೇಳನ-2019, ಸೌರ ಮೇಲ್ಛಾವಣಿ ಘಟಕ ಸಾಮಥ್ರ್ಯದ ಮೌಲ್ಯಮಾಪನ ಸಾಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ರೀಚಾರ್ಜಿಂಗ್ ಸ್ಟೇಷನ್ ಲಾಂಛನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್‍ನಲ್ಲಿ ಘೋಷಿಸಿದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಯೋಜನೆಗೆ ರಾಜ್ಯದ 59ರಿಂದ 60ಲಕ್ಷ ರೈತರಿಗೆ ಮಾತ್ರ ಲಾಭವಾಗಲಿದೆ.ಕರ್ನಾಟಕಕ್ಕೆ 2098 ಕೋಟಿ ರೂ.ಮಾತ್ರ ಅನುದಾನ ಬರುತ್ತಿದೆ.ಆದರೆ, ಇಂಧನ ಇಲಾಖೆ ಕೃಷಿಕರಿಗಾಗಿ 11ಸಾವಿರ ಕೋಟಿ ರೂ.ವಾರ್ಷಿಕ ಸಬ್ಸಿಡಿ ನೀಡುತ್ತಿದೆ.ಉಚಿತ ವಿದ್ಯುತ್ ವ್ಯವಸ್ಥೆಯಿಂದ ವಿದ್ಯುತ್ ಸರಬರಾಜು ಕಂಪೆನಿಗಳು ನಷ್ಟದಲ್ಲಿವೆ. ಬೆಸ್ಕಾಂ ಒಂದರಲ್ಲೇ 4ಸಾವಿರ ಕೋಟಿ ರೂ.ಸಾಲ ಇದೆ.ಈವರೆಗೂ ತೀರಿಸಲು ಆಗಿಲ್ಲ. ಚೆಸ್ಕಾಂನಲ್ಲಿ ಸುಮಾರು 800 ಕೋಟಿ ಸಾಲ ಇದೆ.ಇಂಧನ ಇಲಾಖೆಯ ಮೂಲ ಸಂಸ್ಥೆಯಾದ ವಿದ್ಯುತ್ ಉತ್ಪಾದನಾ ಸಂಸ್ಥೆ 16 ಸಾವಿರ ಕೋಟಿ ಹೊರೆ ಹೊತ್ತಿಕೊಂಡಿದೆ. ಸಬ್ಸಿಡಿ ಬಿಡುಗಡೆ ವ್ಯತ್ಯಯದಿಂದ ಎಸ್ಕಾಂಗಳು ಪ್ರತಿ ವರ್ಷ ಮೂರರಿಂದ ನಾಲ್ಕು ಸಾವಿರ ಕೋಟಿ ರೂ.ನಷ್ಟ ಅನುಭವಿಸುತ್ತಿವೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಉತ್ತಮ ಗುಣಮಟ್ಟದ ವಿದ್ಯುತ್ ಮತ್ತು ಲಾಭದಾಯಕ ಬೆಲೆ ದೊರಕಿಸಿಕೊಟ್ಟರೆ ರೈತರು ಉಚಿತ ವಿದ್ಯುತ್ ಬೇಕು ಎಂದು ಕೇಳುವುದಿಲ್ಲ. ಭೂ ಗರ್ಭದಲ್ಲಿ ತಂತಿಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲಾಗುತ್ತಿದೆ. ಇನ್ನು ಮುಂದೆ ಭೂ ಮೇಲ್ಭಾಗದ ತಂತಿಗಳನ್ನು ಹಂತ ಹಂತವಾಗಿ ಭೂ ಒಳಭಾಗದಲ್ಲಿ ಅಳವಡಿಸಲಾಗವುದು.ಅದರ ಜತೆಗೆ ಇಂಟರ್‍ನೆಟ್ ಸೌಲಭ್ಯದ ಆಪ್ಟಿಕಲ್ ಪೈಬರ್ ತಂತಿಗಳನ್ನು ಅಳವಡಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಲೈನ್‍ಮೆನ್‍ಗಳು ಮತ್ತು ಇತರ ಸಿಬ್ಬಂದಿಗಳು ಸುರಕ್ಷತೆಗೆ ಹೆಚ್ಚಿನ ಗಮನ ವಹಿಸಬೇಕು. ಗ್ರಾಹಕರಲ್ಲೂ ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು, ವಿದ್ಯುತ್ ಸ್ವಾವಲಂಬನೆಯಲ್ಲಿ ನಾವು ದಾಪುಗಾಲು ಇಟ್ಟಿದ್ದೇವೆ. ಕೆಲವು ಲೋಪದೋಷಗಳಿಂದ ಯೋಜನೆಯ ಯಶಸ್ಸು ಆಗಿಲ್ಲ ಎಂದು ವಿಷಾದಿಸಿದರು.

ಕೃಷಿ ಮತ್ತು ಕೈಗಾರಿಕೆ ಅಭಿವೃದ್ಧಿಗೆ ಇಂಧನ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಮುಖ್ಯಮಂತ್ರಿ ಹೇಳಿದರು.

ಬೆಸ್ಕಾಂ ಒಂಬುಡ್ಸಮನ್ ಅಧ್ಯಕ್ಷ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಗ್ರಾಹಕ ಬಹಳ ಮುಖ್ಯ. ಆತ ಯಾರ ಅವಲಂಭಿಯೂ ಅಲ್ಲ. ಆತ ನಮಗೆ ಸೇವೆ ಮಾಡುವ ಅವಕಾಶ ನೀಡಿದ್ದಾನೆ. ನಮ್ಮ ಸೇವೆಯಿಂದ ಆತನಿಗೆ ಉಪಕಾರ ಮಾಡುತ್ತಿಲ್ಲ, ಬದಲಾಗಿ ನಾವು ಸೇವೆ ಮಾಡುವ ಅವಕಾಶಕ್ಕಾಗಿ ನಾವು ಧನ್ಯವಾದ ಹೇಳಬೇಕು ಎಂದಿದ್ದಾರೆ. ಹಾಗಾಗಿ ನಾವು ಉತ್ತಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ 1910 ಇಂಡಿಯನ್ ಎಲೆಕ್ಟ್ರಿಸಿಟಿ ಆಕ್ಟ್ ರಚನೆಯಾಗಿತ್ತು.ಇದು ಬ್ರಿಟಿಷ್ ಮಾದರಿಯಾಗಿತ್ತು.ಸ್ವಾತಂತ್ರ್ಯ ನಂತರ 1948ರಲ್ಲಿ ಎಲೆಕ್ಟ್ರಿಸಿಟಿ ಆಕ್ಟ್ ರಚನೆ ಮಾಡಲಾಯಿತು.ಅದನ್ನು 2003ರಲ್ಲಿ ಬದಲಾವಣೆ ಮಾಡಿ ಪ್ರಸರಣಾ, ಉತ್ಪಾದನೆ ಸೇರಿ ವಿವಿಧ ಸೇವೆಗಳು ಪ್ರತ್ಯೇಕಗೊಂಡಿವೆ. ಹಾಗಾಗಿ ವಿದ್ಯುತ್ ಪೂರೈಕೆ ಉತ್ತಮಗೊಂಡಿದೆ ಎಂದರು.

ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಯನ್ನು 2004ರಲ್ಲಿ ರಚನೆ ಮಾಡಲಾಗಿದೆ.ಗ್ರಾಹಕರು ಈ ಒಂಬುಡ್ಸ್ ಮನ್ ಮುಂದೆ ತಮ್ಮ ದೂರನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು.ಪ್ರತಿ ಶನಿವಾರ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲಾಗುತ್ತದೆ.ಪ್ರತಿ ಜಿಲ್ಲೆಗಳಲೂ ವೇದಿಕೆಗಳು ಸ್ಥಾಪನೆಯಾಗಿವೆ. ಗ್ರಾಹಕರಿಗೆ ಇದರ ಮಾಹಿತಿ ಕೊರತೆ ಇದೆ.ನಾವು ಸಂಗ್ರಹಿಸಿದ ದೂರು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಾಗುತ್ತದೆ.ಕಳೆದ ವರ್ಷ ರವಾನಿಸಿದ ವರದಿಯ ಪ್ರಕಾರ ರಾಜ್ಯದಲ್ಲಿ 83 ದೂರು ಮಾತ್ರ ಬಾಕಿ ಇವೆ. ಬಹಳಷ್ಟು ಜಿಲ್ಲೆಗ ದೂರುಗಳೆ ದಾಖಲಾಗುತ್ತಿಲ್ಲ.

ಸಿಜಿಆರ್‍ಎಫ್ ಮುಂದೆ ಬಿಲ್ಲಿಂಗ್, ಸೇವೆ ವಿಳಂಬ ಸೇರಿ 15 ಸೇವೆಗಳನ್ನು ನಿಗದಿತ ಅವಧಿಯಲ್ಲಿ ಸೇವೆ ಒದಗಿಸದಿದ್ದರೆ ಗ್ರಾಹಕರು ದೂರು ದಾಖಲಿಸಬಹುದು. ಜಿಲ್ಲಾ ಮಟ್ಟದ ವೇದಿಕೆಗಳು 60 ದಿನದಲ್ಲಿ ಪರಿಹಾರದ ಆದೇಶ ನೀಡಲಿದ್ದಾರೆ, ಅಲ್ಲಿ ಬಗೆಹರಿಯದಿದ್ದರೆ ರಾಜ್ಯಮಟ್ಟದ ಒಂಬುಡ್ಸ್ ಮನ್ ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.

ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರವಿಕುಮಾರ್, ಬೆಸ್ಕಾಂನ ಎಂಡಿ ಶಿಖಾ, ಕಾಸೀಯದ ಅಧ್ಯಕ್ಷ ಬಸವರಾಜು ಜವಳಿ, ಪಿಣ್ಯಾ ಕೈಗಾರಿಕಾ ಪ್ರದೇಶ ಸಂಘದ ಅಧ್ಯಕ್ಷ ಎಂ.ಎನ್.ಗಿರಿ, ಬೆಸ್ಕಾಂನ ನಾಗರಿಕ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ಮರಳಿ, ಎಂಎಲ್‍ಸಿ ಬೋಜೆಗೌಡ, ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್ ಮತ್ತಿತರರು ಹಾಜರಿದ್ದರು.

ವಿದ್ಯುತ್ ಚಾಲಿತ ವಾಹನಗಳ ರಿಚಾರ್ಜ್ ಪಾಯಿಂಟ್ ಲೋಗೋ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ಹೆಬ್ಬಾಳದ ಭರತ್ ಕುಮಾರ್, ಕ್ಯಾಲೆಂಡರ್ ಕವರ್ ಸೀಟ್ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ಮಂಜುಳಾ ಅವರನ್ನು ಸಿಎಂ ಅಭಿನಂದಿಸಿದರು. ಉತ್ತಮ ಸೇವೆ ಸಲ್ಲಿಸಿದ ಬೆಸ್ಕಾಂ ಜಾಗೃತ ದಳದ 40 ಮಂದಿಗೆ ಪೈಕಿ ನಾಲ್ಕು ಮಂದಿಯನ್ನು ಸಾಂಕೇತಿಕವಾಗಿ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ