ಧಾರವಾಡ, ಫೆ.5- ಇತ್ತ ರಾಜ್ಯ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಬೇಕೆಂದು ಬಿಜೆಪಿ ಶತಾಯ-ಗತಾಯ ಪ್ರಯತ್ನ ನಡೆಸಿದ್ದರೆ, ಅತ್ತ ಧಾರವಾಡ ಜಿಲ್ಲಾ ಪಂಚಾಯತ್‍ನಲ್ಲಿ ಆಡಳಿತ ಹೊಂದಿದ್ದ ಬಿಜೆಪಿ ತನ್ನ ಆಡಳಿತ ಕಳೆದುಕೊಂಡು ಹೀನಾಯ ಪರಿಸ್ಥಿತಿಗೆ ಬಂದು ತಲುಪಿದೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಧಾರವಾಡ ಜಿಪಂ ಆಡಳಿತವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಬಿಜೆಪಿ ವಶದಲ್ಲಿದ್ದ ಆಡಳಿತವನ್ನುತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗುವ ಮೂಲಕ ಬಿಜೆಪಿಗೆ ತೀವ್ರ ಮುಖಭಂಗ ಉಂಟುಮಾಡಿದೆ.
ಇಂದು ನಿಗದಿಯಾಗಿದ್ದ ಜಿಪಂ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸದ ಪರ 16 ಮತಗಳು ಚಲಾವಣೆಯಾದವು.ಒಟ್ಟು 22 ಸ್ಥಾನಗಳನ್ನು ಹೊಂದಿರುವ ಜಿಪಂನಲ್ಲಿ ಬಿಜೆಪಿ ಆರು ಮತಗಳನ್ನು ಪಡೆಯುವುದರೊಂದಿಗೆ ಕಳೆದ ಎರಡು ವರ್ಷಗಳಿಂದ ಆಡಳಿತ ನಿರ್ವಹಣೆ ಮಾಡಿದ್ದ ಪಕ್ಷ ನಿರ್ಗಮಿಸಬೇಕಾಯಿತು.
ಕಳೆದ ಒಂದು ವಾರದ ಹಿಂದೆಯೇ ಕಾಂಗ್ರೆಸ್ ಪಕ್ಷದವರು ಜಿಪಂ ಆಡಳಿತ ಪಕ್ಷವಾದ ಬಿಜೆಪಿ ವಿರುದ್ಧ ಅವಿಶ್ವಾಸ ಮಂಡಿಸಲು ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಸಿಇಒ ಇಂದು ದಿನಾಂಕ ನಿಗದಿಪಡಿಸಿದ್ದು, ಬೆಳಗ್ಗೆ 10.30ರ ವೇಳೆಗೆ ಜಿಪಂ ಸದಸ್ಯರ ಸಭೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಪಕ್ಷದಿಂದ ಜಿಪಂಗೆ ಆಯ್ಕೆಯಾಗಿದ್ದ ಗರಗ ಕ್ಷೇತ್ರದ ರತ್ನ ದಯಾನಂದ ಪಾಟೀಲ್, ತಬಕದ ಹೊನ್ನಿಹಳ್ಳಿ ಕ್ಷೇತ್ರದ ಮಂಜಪ್ಪ ಶೇಕಪ್ಪ ಹರಿಜನ, ಗಳಗಿ ಕ್ಷೇತ್ರದ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಿಗೇರಿ ಕ್ಷೇತ್ರದ ಜ್ಯೋತಿ ಶಿವಾನಂದ ಬೆಂತೂರ ಹಾಗೂ ಓರ್ವ ಪಕ್ಷೇತರರಾಗಿರುವ ಜಿಪಂ ಉಪಾಧ್ಯಕ್ಷರಾದ ಶಿವಾನಂದ ಕರಿಗಾರ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಪರ ಮತ ಚಲಾಯಿಸಿದರು.
ಬಿಜೆಪಿ ಸದಸ್ಯರಿಗೆ ಈಗಾಗಲೇ ವಿಪ್ ಜಾರಿ ಮಾಡಿದ್ದರೂ ಅದನ್ನು ಪರಿಗಣಿಸದೆ ಕಾಂಗ್ರೆಸ್ ಪರ ಮತ ಚಲಾಯಿಸಿದ್ದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿತು. ವಿಪ್ ಉಲ್ಲಂಘಿಸಿ ಬಿಜೆಪಿ ಸದಸ್ಯರು ಮತ ಚಲಾಯಿಸಿದ್ದರಿಂದ ಜಿಪಂ ಅಧ್ಯಕ್ಷರಾಗಿದ್ದ ಚೈತ್ರ ಗುರುಪಾದ ಶಿರೂರು ಅವರು ಅಧಿಕಾರ ಕಳೆದು ಕೊಳ್ಳುವಂತಾಯಿತು. ಇನ್ನು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಈಗಾಗಲೇ ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಮೀಸಲು ನಿಗದಿ ಯಾಗಿರುವುದರಿಂದ ಕಾಂಗ್ರೆಸ್‍ನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಕರಾದ ಮರಬ ಕ್ಷೇತ್ರದ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಇದೆ.
ಇನ್ನು ಹಾಲಿ ಉಪಾಧ್ಯಕ್ಷರಾದ ಶಿವಾನಂದ ಕರಿಗಾರ್ ಅವರೇ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ನಡೆಯುತ್ತಿದ್ದ ಶೀತಲ ಸಮರ ಅಂತ್ಯಗೊಂಡಿದ್ದು, ಕಾಂಗ್ರೆಸ್‍ನ ಚಾಣಾಕ್ಷ ರಾಜಕೀಯ ನಡೆಯಿಂದ ಧಾರವಾಡ ಜಿಪಂ ಅನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.