ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಕಾರು: ಘಟನೆಯಲ್ಲಿ ಮೂವರ ಸಾವು

ನೆಲಮಂಗಲ, ಫೆ.5- ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಉತ್ತರ ಪ್ರದೇಶ ಮೂಲದ ಇಬ್ಬರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಉತ್ತರ ಪ್ರದೇಶದ ಜಗದೀಶ್ ಪ್ರಸಾದ್ ದುಬೇಯ್ (53), ಜಯಶಂಕರ (45) ಮತ್ತು ಕಾರು ಚಾಲಕ ಬೆಂಗಳೂರಿನ ಸುಲ್ತಾನ್‍ಪಾಳ್ಯದ ಸುರೇಶ್ (24) ಮೃತಪಟ್ಟ ದುರ್ದೈವಿಗಳಾಗಿದ್ದು, ಲಾಲ್‍ಮನ್‍ಯಾದವ್ (41) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಆರ್‍ಟಿ ನಗರದಲ್ಲಿ ಜಗದೀಶ್ ಪ್ರಸಾದ್, ಜಯಶಂಕರ್, ಲಾಲ್‍ಮನ್ ಯಾದವ್ ವಾಸವಾಗಿದ್ದು, ಧರ್ಮಸ್ಥಳಕ್ಕೆ ಕಾರು ಮಾಡಿಕೊಂಡು ಹೋಗಿದ್ದರು. ರಾತ್ರಿ ನಗರಕ್ಕೆ ವಾಪಸಾಗುತ್ತಿದ್ದಾಗ ಬೆಂಗಳೂರು ಹೊರವಲಯದ ಮಾಗಡಿ ತಾಲೂಕು ರಾಷ್ಟ್ರೀಯ ಹೆದ್ದಾರಿ-75ರ ಕುಣಿಗಲ್ ರಸ್ತೆ ಮರೂರು ಹ್ಯಾಂಡ್‍ಪೊಸ್ಟ್ ಸಮೀಪದ ರಸ್ತೆಪಾಳ್ಯ ಬಳಿ ಇಂದು ಬೆಳಗ್ಗೆ 7.15ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ.

ಪರಿಣಾಮವಾಗಿ ಕಾರು ಚಾಲಕ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಇಬ್ಭಾಗವಾದಂತೆ ಕಾಣುತ್ತಿತ್ತು.

ಸುದ್ದಿ ತಿಳಿದ ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮೂವರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಪಘಾತಕ್ಕೆ ಅತಿ ವೇಗ ಚಾಲನೆ ಹಾಗೂ ಅಜಾಗರೂಕತೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ