ಜಮೀನು ವಿವಾದ ಸಂಬಂಧ ಅಪ್ಪ-ಮಗನ ಕೊಲೆಯಲ್ಲಿ ಅಂತ್ಯ

ಹೊಸಕೋಟೆ, ಫೆ.5- ಕಳೆದ ಮೂವತ್ತು ವರ್ಷಗಳಿಂದ ಬಗೆಹರಿಯದ ಜಮೀನು ವಿವಾದ ಇದೀಗ ಅಪ್ಪ-ಮಗನ ಕೊಲೆಯಲ್ಲಿ ಅಂತ್ಯ ಕಂಡು ಆರೋಪಿ ಜೈಲು ಪಾಲಾಗಿರುವ ಘಟನೆ ಅನುಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿಯ ಮುತ್ತಕದಹಳ್ಳಿಯ ನಾರಾಯಣರೆಡ್ಡಿ (60) ಮತ್ತು ಇವರ ಪುತ್ರ ಲಿಂಗಾರೆಡ್ಡಿ (33) ಕೊಲೆಯಾದ ದುರ್ದೈವಿಗಳು.

ಆರೋಪಿ ಮುತ್ತುಕದಹಳ್ಳಿಯ ಬಾಬು (35) ಪೊಲೀಸರಿಗೆ ಶರನಾಗಿದ್ದಾನೆ.

ಗ್ರಾಮದ ನಾರಾಯಣರೆಡ್ಡಿ ಅದೇ ಗ್ರಾಮದ ಬಾಬುವಿಗೆ ಜಮೀನು ನೀಡಿದ್ದರು.ಆದರೆ, ನೋಂದಣಿ ಮಾಡಿಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಆಗಿಂದಾಗ್ಗೆ ಇವರ ಮಧ್ಯೆ ಜಗಳ ನಡೆಯುತ್ತಲೇ ಇತ್ತು.ಕೆಲವರ ಮಧ್ಯಸ್ಥಿಕೆಯಿಂದ ಜಗಳ ತಣ್ಣಗಾಗಿತ್ತಾದರೂ ಆಗಿಂದಾಗ್ಗೆ ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ.

ನಿನ್ನೆ ನಾರಾಯಣರೆಡ್ಡಿ ಹಾಗೂ ಲಿಂಗಾರೆಡ್ಡಿ ನೀಲಗಿರಿ ತೋಪಿನ ಬಳಿ ಕೆಲಸ ಮಾಡುತ್ತಿದ್ದಾಗ ಬಾಬು ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.

ಮಚ್ಚು ಹಿಡಿದುಕೊಂಡೇ ಬಂದಿದ್ದ ಬಾಬು ಮೊದಲು ನಾರಾಯಣರೆಡ್ಡಿ ಮೇಲೆ ಹಲ್ಲೆ ನಡೆಸಿ ನಂತರ ಲಿಂಗಾರೆಡ್ಡಿ ಮೇಲೆಯೂ ಹಲ್ಲೆ ನಡೆಸಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಘಟನೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.ಮೃತರ ಪತ್ನಿಯರು ಹಾಗೂ ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು.
ವೈಟ್‍ಫೀಲ್ಡ್‍ನ ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.

ಆರೋಪಿ ಬಾಬುವಿಗೆ ಮರಣ ದಂಡನೆ ಶಿಕ್ಷೆಯಾಗಬೇಕೆಂದು ಪೊಲೀಸರ ಮುಂದೆ ವಿನಂತಿ ಮಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ