ಬೆಂಗಳೂರು, ಫೆ.3-ಉತ್ತಮ ಆರೋಗ್ಯದ ಬಗ್ಗೆ ಅರಿವು ಹೊಂದಿದ್ದರೆ ಸಾಲದು, ಆರೋಗ್ಯದ ಬಗ್ಗೆ ಪರಿಣಾಮಕಾರಿ ಫಲಿತಾಂಶ ಪಡೆಯಲುದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕಿ ಸೌಮ್ಯರೆಡ್ಡಿ ಅಭಿಪ್ರಾಯಪಟ್ಟರು.
ಜಯನಗರದ ಕಿತ್ತೂರುರಾಣಿ ಚೆನ್ನಮ್ಮ ಮೈದಾನದಿಂದ ಆರಂಭಗೊಂಡ ವಾಕಥಾನ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಸೈದ್ಧಾಂತಿಕ ಜ್ಞಾನ ಹೊಂದಿರುವ ಜೊತೆಗೆ ಅದರಲ್ಲಿ ಪರಿಣಾಮಕಾರಿಯಾದ ಫಲಿತಾಂಶ ಕೇಳಲು ಬದಲಾವಣೆ ಅನಿವಾರ್ಯವಾಗಿರುತ್ತದೆ. ನಾವು ನಮ್ಮ ಕೆಲಸವನ್ನು ಮಾಡಿಕೊಂಡು ಬೇರೆಯವರಿಗೆ ಹೊರೆಯಾಗದಂತೆ ಇದ್ದರೆ ನಾವು ಕೂಡ ಆರೋಗ್ಯವಾಗಿರುತ್ತೇವೆ ಎಂದು ಹೇಳಿದರು.
ಹಿರಿಯ ನಾಗರಿಕರೆಂದು ಸುಮ್ಮನೆ ಕೂರುವುದು ತಪ್ಪು.ತಮ್ಮ ಕೈಲಾದ ಕೆಲಸವನ್ನು ಮಾಡುವುದು ವಾಯುವಿಹಾರ, ಸ್ನೇಹಿತರೊಂದಿಗೆ ಮಾತನಾಡುವುದರಿಂದ ಮನಸ್ಸಿನ ಭಾರ ಇಳಿದು ಮನಸ್ಸು ಆಹ್ಲಾದಗೊಳ್ಳುತ್ತದೆ ಎಂದು ಹೇಳಿದರು.
ಫಸ್ಟ್ ಆರ್ಯ ವೈಶ್ಯ ಬುಸಿನೆಸ್ ನೆಟ್ವರ್ಕಿಂಗ್ ಗ್ರೂಪ್ ಬಿಷಿಪ್ ಸಂಸ್ಥೆ ಇಂದು ಬೆಳಗ್ಗೆ 6 ರಿಂದ ಹಮ್ಮಿಕೊಂಡಿದ್ದ ವಾಕಥಾನ್ನಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಿಂದ ಹೊರಟ ವಾಕಥಾನ್ ಅಶೋಕ ಪಿಲ್ಲರ್, ಆರ್.ವಿ.ಟೀಚರ್ಸ್ ಕಾಲೇಜು ವೃತ್ತ, ಸೌತೆಂಡ್ ಸರ್ಕಲ್, ಎನ್ಎಂಕೆಆರ್ವಿ ಕಾಲೇಜು, 3ನೇಹಂತದ ವೃತ್ತದ ಮೂಲಕ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ತಲುಪಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಎನ್.ನಾಗರಾಜ್, ಬಿಷಿಪ್ನ ಅಧ್ಯಕ್ಷ ಶ್ರೀಧರ್, ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ನಾಗರಾಜ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.