ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು, ಫೆ.3-ಭಾನುವಾರ ರಜಾ ದಿನವಾದರೂ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಜೆಡಿಎಸ್‍ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವ ಜೊತೆಗೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಇನ್ನೊಂದೆಡೆ ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಈಗ ಬಿಜೆಪಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ್ದು, ಕಾಂಗ್ರೆಸ್ ಶಾಸಕರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಅಭದ್ರತೆ ಇಲ್ಲ. ನಾವು ಮೈತ್ರಿ ಯಾಗಿಯೇ 5 ವರ್ಷ ಅಧಿಕಾರ ಪೂರ್ಣಗೊಳಿಸುತ್ತೇವೆ ಎಂದು ಪರಮೇಶ್ವರ್ ಅವರು ದೇವೇಗೌಡರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ತಯಾರಿ ನಡೆಸುತ್ತಿದ್ದು, ಎರಡೂ ಪಕ್ಷಗಳ ಪ್ರಣಾಳಿಕೆ ಆಧರಿಸಿ ಸಿದ್ಧಗೊಳಿಸಲಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಬಜೆಟ್ ರೂಪಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾವು ಜನಪರ ಬಜೆಟ್ ನೀಡಲೇಬೇಕಿದೆ.ಹೀಗಾಗಿ ಎರಡೂ ಪಕ್ಷಗಳು ಸಣ್ಣಪುಟ್ಟ ಹೊಂದಾಣಿಕೆ ಮಾಡಿಕೊಳ್ಳಬೇಕು. ಕೇಂದ್ರ ಬಜೆಟ್‍ನಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂ. ವಿಶೇಷ ನೆರವು ನೀಡುತ್ತಿರುವುದು ಮತ್ತು ಅಸಂಘಟಿತ ಕಾರ್ಮಿಕ ವರ್ಗಕ್ಕೆ 3 ಸಾವಿರ ಪಿಂಚಣಿ ಘೋಷಿಸಿರುವುದು ಚರ್ಚಿತ ವಿಷಯವಾಗಿದೆ. ಕಾಂಗ್ರೆಸ್-ಜೆಡಿಎಸ್‍ನ ಮತ ಬ್ಯಾಂಕ್‍ಗಳ ಮೇಲೆ ಬಿಜೆಪಿ ಕಣ್ಣು ಹಾಕಿದ್ದು, ಅದಕ್ಕೆ ಎದಿರೇಟಾಗಿ ನಾವೂ ಕೂಡ ರಾಜ್ಯ ಬಜೆಟ್‍ನಲ್ಲಿ ಜನಪರ ಯೋಜನೆಗಳನ್ನು ಘೋಷಿಸಬೇಕಿದೆ ಎಂದು ಇಬ್ಬರು ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಮೈತ್ರಿ ಸಂಬಂಧವಾಗಿ ಈ ಸಂದರ್ಭದಲ್ಲಿ ಚರ್ಚೆ ನಡೆದಿದ್ದು, ಸ್ಥಾನಗಳ ಹಂಚಿಕೆ ವಿಷಯದಲ್ಲಿ ಸಣ್ಣ ಪುಟ್ಟ ಹೊಂದಾಣಿಕೆ ಮಾಡಿಕೊಳ್ಳಬೇಕು, ಎರಡೂ ಪಕ್ಷಗಳ ಮೈತ್ರಿ ಸಂಬಂಧ ಹದಗೆಡಿಸಲು ಬಹಳಷ್ಟು ಮಂದಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡದಂತೆ ಎಚ್ಚರದಿಂದಿರಬೇಕು ಎಂದು ಇಬ್ಬರೂ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ.

ಇತ್ತೀಚೆಗೆ ಜೆಡಿಎಸ್‍ನ ಸಮಾವೇಶದಲ್ಲಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಕೂಡ ಈ ಸಂದರ್ಭದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಸ್.ಎಂ.ಕೃಷ್ಣ ಅವರು ಕೋಲಾರದಲ್ಲಿ ಭೇಟಿಯಾಗಿದ್ದಾರೆ. ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಇಬ್ಬರೂ ನಾಯಕರು ಪರಸ್ಪರ ಎದುರಾಗಿದ್ದು, ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರ ಆರೋಗ್ಯವನ್ನು ಸಿದ್ದರಾಮಯ್ಯ ಅವರು ಆತ್ಮೀಯವಾಗಿ ವಿಚಾರಿಸಿದರು. ಎಸ್.ಎಂ.ಕೃಷ್ಣ ಅವರು ಸಿದ್ದು ಅವರ ಬೆನ್ನು ತಟ್ಟಿ ತುಂಬಾ ಆತ್ಮೀಯವಾಗಿ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ