ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ

ಬೆಂಗಳೂರು, ಫೆ.3-ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಬುಧವಾರ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆಯನ್ನು ಜಂಟಿಯಾಗಿಯೇ ಎದುರಿಸುವುದಾಗಿ ಎರಡೂ ಪಕ್ಷಗಳ ಹೈಕಮಾಂಡ್ ನಿರ್ಧರಿಸಿದೆ. ಆದರೆ ಮೈತ್ರಿ ವಿಷಯವಾಗಿ ಸ್ಥಳೀಯ ಮಟ್ಟದಲ್ಲಿ ಭಾರೀ ವಿರೋಧಗಳು ವ್ಯಕ್ತವಾಗಿವೆ. ಕಾಂಗ್ರೆಸ್‍ನ ನಾಯಕರು ಈಗಾಗಲೇ ಹಲವಾರು ಸುತ್ತಿನ ಸಭೆಗಳನ್ನು ನಡೆಸಿ ಸ್ಥಳೀಯ ನಾಯಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್ ಪಕ್ಷವು ಕಾಂಗ್ರೆಸ್ ಸಂಸದರಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳ ಜೊತೆಗೆ ಹಾಸನ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಮಂಡ್ಯ, ಮೈಸೂರು, ಬೀದರ್, ಹುಬ್ಬಳ್ಳಿ-ಧಾರವಾಡ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ.

ಕಾಂಗ್ರೆಸ್ ಸ್ಥಳೀಯ ನಾಯಕರು ಮೈತ್ರಿಯೇ ಬೇಡ.ಸ್ವತಂತ್ರವಾಗಿಯೇ ಚುನಾವಣೆ ಎದುರಿಸೋಣ ಎಂಬ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಜೆಡಿಎಸ್‍ಗೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರ ಬಿಟ್ಟುಕೊಟ್ಟರೆ ಅದು ಕಾಂಗ್ರೆಸ್ ಪಾಲಿಗೆ ಆತ್ಮಹತ್ಯೆ ಮಾಡಿಕೊಂಡಂತೆ ಎಂಬ ವಾದಗಳಿವೆ.

ಉತ್ತರ ಕರ್ನಾಟಕ ಭಾಗದ ಹಾವೇರಿ, ಬೆಳಗಾವಿ, ಕೊಪ್ಪಳ, ಧಾರವಾಡ ಕ್ಷೇತ್ರಗಳು ಸೇರಿ ಸುಮಾರು 6 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಬಹುದು ಎಂದು ಕಾಂಗ್ರೆಸ್‍ನ ಹಿರಿಯ ನಾಯಕರ ಲೆಕ್ಕಾಚಾರವಾಗಿದೆ.ಆದರೆ ಹಳೇ ಮೈಸೂರು ಭಾಗದಲ್ಲೇ ಹೆಚ್ಚಿನ ಸ್ಥಾನಗಳಿಗಾಗಿ ಜೆಡಿಎಸ್ ಪಟ್ಟು ಹಿಡಿದಿದೆ. ಜೆಡಿಎಸ್ ಕೇಳುತ್ತಿರುವ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‍ನವರೇ ಇದ್ದಾರೆ. ಹೀಗಾಗಿ ಹೊಂದಾಣಿಕೆ ಕಷ್ಟ ಎಂಬ ಪರಿಸ್ಥಿತಿ ಇದೆ.

ಫೆ.6 ರಿಂದ ಬೆಂಗಳೂರಿನ ಅರಮನೆ ಆವರಣದಲ್ಲಿ ರಾಜ್ಯ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಅದರಲ್ಲಿ ಪಕ್ಷದ ಎಲ್ಲಾ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಶಾಸಕರು, ಸಂಸದರು, ಸಚಿವರು, ಮುಂಚೂಣಿ ಘಟಕಗಳ ಪ್ರಮುಖರು ಭಾಗವಹಿಸುತ್ತಿದ್ದಾರೆ.

ಇದು ಲೋಕಸಭೆ ಚುನಾವಣೆಯ ಮೈತ್ರಿ ಸಂಬಂಧವಾಗಿ ಅತ್ಯಂತ ಮಹತ್ವದ ಸಭೆಯಾಗಿದೆ.ಜಾತ್ಯತೀತ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂಬುದು ಕಾಂಗ್ರೆಸ್‍ನ ಲೆಕ್ಕಾಚಾರವಾಗಿದ್ದು, ರಾಜ್ಯ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿಯ ಅನುಮತಿಯ ಅಗತ್ಯವಿದೆ.

ಕಾರ್ಯಕಾರಿ ಸಮಿತಿಯಲ್ಲಿ ಮೈತ್ರಿಗೆ ಸಹಮತ ವ್ಯಕ್ತಪಡಿಸಿ ನಿರ್ಣಯ ಕೈಗೊಂಡರೆ ದೋಸ್ತಿಗಳಿಗೆ ಚುನಾವಣಾ ಪೂರ್ವ ಮೈತ್ರಿ ಸುಲಭವಾಗಲಿದೆ. ಒಂದು ವೇಳೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿರೋಧ ವ್ಯಕ್ತವಾದರೆ ಅದು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಹೀಗಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗವಹಿಸಿ ಪದಾಧಿಕಾರಿಗಳ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ