ಶಾಸಕರ ಒಗ್ಗಟ್ಟು ಕಾಪಾಡಿಕೊಳ್ಳಲು ಮುಂದಾದ ಕಾಂಗ್ರೇಸ್

ಬೆಂಗಳೂರು, ಫೆ.2-ಕಾಂಗ್ರೆಸ್ ಪಕ್ಷ ತನ್ನ ಶಾಸಕರ ಒಗ್ಗಟ್ಟು ಕಾಪಾಡಿಕೊಳ್ಳಲು ಮತ್ತೆ ಮುಂದಾಗಿದೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ತನ್ನ ಶಾಸಕರ ಒಗ್ಗಟ್ಟಿನ ಪ್ರದರ್ಶನಕ್ಕೆ ಮತ್ತೊಮ್ಮೆ ತಂತ್ರ ಹೆಣೆದಿದೆ.

ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿ ಧನವಿನಿಯೋಗಕ್ಕೆ ಅಡಚಣೆಯಾದರೆ ಮೈತ್ರಿ ಸರ್ಕಾರ ಮುಜುಗರಕ್ಕೀಡಾಗಬೇಕಾಗುತ್ತದೆ. ಹೀಗಾಗಿ ಮೈತ್ರಿ ಪಕ್ಷದ ಶಾಸಕರು ಒಗ್ಗಟ್ಟಿನ ಜಪಕ್ಕೆ ಮುಂದಾಗಿದ್ದಾರೆ.

ಆಪರೇಷನ್ ಕಮಲದ ಭೀತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ನಡೆಸಿ ಶಾಸಕರಿಬ್ಬರ ನಡುವೆ ನಡೆದ ಹೊಡೆದಾಟ-ಬಡಿದಾಟ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಆ ಮುಜುಗರದ ಸನ್ನಿವೇಶದಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ. ಆಪರೇಷನ್ ಕಮಲದತ್ತ ಮುಖ ಮಾಡಿದ್ದ ಅತೃಪ್ತ ಶಾಸಕರ ಮನವೊಲಿಕೆ ಮಾಡುವಲ್ಲಿಯೇ ನಾಯಕರು ಹೈರಾಣಾಗಿದ್ದಾರೆ. ಕಾಂಗ್ರೆಸ್ ಶಾಸಕರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿಲ್ಲ. ದೋಸ್ತಿ ನಾಯಕರ ಗುದ್ದಾಟ ಬಹಿರಂಗಗೊಂಡಿದ್ದು, ದಿನೇ ದಿನೇ ತಾರಕಕ್ಕೇರುತ್ತಿದೆ.

ಕಾಂಗ್ರೆಸ್-ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.ಈ ಭಿನ್ನಮತದ ಲಾಭ ಪಡೆಯಲು ಬಿಜೆಪಿ ಅವಿಶ್ವಾಸದ ಬಾಣ ಬಿಡುವ ಸಾಧ್ಯತೆ ಇದೆ.ಅಧಿವೇಶನದಲ್ಲಿ ಅವಿಶ್ವಾಸದ ಪರೀಕ್ಷೆಯನ್ನು ಎದುರಿಸಬೇಕಾದರೆ ಅತೃಪ್ತ ನಾಯಕರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಶಾಸಕಾಂಗ ಸಭೆ ನಡೆಸಿ ನಾವೆಲ್ಲ ಒಂದಾಗಿದ್ದೇವೆ ಎಂಬ ಸಂದೇಶವನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದರು.ನಂತರ ನಡೆದ ರಾಜಕೀಯ ಬೆಳವಣಿಗೆಗಳು ಅತೃಪ್ತ ಅಸಮಾಧಾನ ಹೋಗಲಾಡಿಸಿರಲಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇತ್ತು.

ಆಪರೇಷನ್ ಕಮಲದ ಚಟುವಟಿಕೆಗಳು ಇನ್ನೂ ಮುಂದುವರೆದೇ ಇವೆ. ಅಧಿವೇಶನಕ್ಕೂ ಮುನ್ನವೇ ಹಲವು ಅತೃಪ್ತ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಕೂಡ ಹರಿದಾಡುತ್ತಿದೆ. ಕಾಂಗ್ರೆಸ್‍ನ ಹಲವು ಶಾಸಕರು ರಾಜ್ಯಪಾಲರು, ನಂತರ ಸ್ಪೀಕರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಡುವೆ ಅಧಿವೇಶನದ ವೇಳೆ ಬಿಜೆಪಿ, ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದರೆ ಅವಿಶ್ವಾಸದ ಪರ ಅತೃಪ್ತರು ಮತ ಚಲಾಯಿಸಿದರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊದಲೇ ಕಾಂಗ್ರೆಸ್ ನಾಯಕರು ಒಗ್ಗಟ್ಟು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಗೈರಾಗಿದ್ದರು.
ಇದರಲ್ಲಿ ಉಮೇಶ್ ಜಾಧವ್ ಹೊರತುಪಡಿಸಿ ಉಳಿದವರು ಗೈರು ಹಾಜರಿಗೆ ಸ್ಪಷ್ಟನೆ ನೀಡಿದ್ದರು.

ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿದ್ದ ಉಮೇಶ್ ಜಾಧವ್ ಅವರು ಈವರೆಗೂ ಅಧಿಕಾರ ಸ್ವೀಕರಿಸಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರೂ ಪಕ್ಷದ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಅವರ ಮನವೊಲಿಕೆಯ ಪ್ರಯತ್ನಗಳು ನಡೆದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ