ಜನ ಸಾಮಾನ್ಯರಿಗೂ ಸರ್ಕಾರದ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವ ಹಕ್ಕಿದೆ: ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಎಸ್.ಅಬ್ದುಲ್ ನಜೀರ್

ಬೆಂಗಳೂರು, ಫೆ.2-ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ ನ್ಯಾಯಿಕ ವಿಧಾನಗಳು ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಸ್.ಅಬ್ದುಲ್ ನಜೀರ್ ಅವರು, ಜವಾಬ್ದಾರಿಯುತ ಸರ್ಕಾರ ತನ್ನ ಎಲ್ಲಾ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯಾವುದನ್ನೂ ಗೌಪ್ಯವಾಗಿಡಬಾರದು. ನೆಲದ ಕಾನೂನು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಬೇಕು.ಜನ ಸಾಮಾನ್ಯರಿಗೂ ಸರ್ಕಾರದ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಹೇಳಿದರು.

ಮಾಹಿತಿ ಹಕ್ಕಿನ ಮೂಲ ಉದ್ದೇಶ ಎಂದರೆ ಸಾರ್ವಜನಿಕರು ಮಾಹಿತಿ ಪಡೆದು ಅದನ್ನು ಪರಿಶೀಲಿಸಿ ಸರ್ಕಾರದಲ್ಲಾಗುತ್ತಿರುವ ಲೋಪದೋಷಗಳ ಬಗ್ಗೆ ಸಲಹೆ- ಸೂಚನೆಗಳನ್ನು ನೀಡಿ ಆಡಳಿತವನ್ನು ಸುಧಾರಿಸಲು ಸಹಕರಿಸುವಂತಹದ್ದು. ಹೀಗಾಗಿ ಸುಪ್ರೀಂಕೋರ್ಟ್ ಭಾರತದ ಪ್ರತಿಯೊಬ್ಬ ಪ್ರಜೆಯೂ ಮಾಹಿತಿ ಪಡೆಯುವುದು ಮೂಲಭೂತ ಹಕ್ಕು ಎಂದು ಪ್ರತಿಪಾದನೆ ಮಾಡಿದೆ.

ಅರ್ಥಗರ್ಭಿತವಾದ ಮತ್ತು ಪ್ರಸ್ತುತವಾದ ಮಾಹಿತಿಗಳು ಜನರಿಗೆ ಶೀಘ್ರವೇ ತಲುಪಬೇಕು.ಅರ್ಜಿಗಳ ವಿಲೇವಾರಿ ಕಾಲಮಿತಿಯಲ್ಲಿ ನಡೆಯಬೇಕು. ಭ್ರಷ್ಟಾಚಾರ ನಿಗ್ರಹಕ್ಕೆ ಆರ್‍ಟಿಐ ಅಸ್ತ್ರವಾಗಬೇಕು.ನ್ಯಾಯಿಕ ವಿಧಾನಗಳು ಸಮರ್ಪಕವಾಗಿ ನಡೆಯಬೇಕು.ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಬೇಕು ಎಂದರು.

ಪ್ರಾಚೀನ ಕಾಲದಲ್ಲಿ ಜನ ನೀತಿವಂತರಾಗಿದ್ದರು.ಈಗ ವ್ಯವಸ್ಥೆಯನ್ನು ಸಮದೂಗಿಸಲು ಕಾನೂನಿನ ಬಳಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್‍ನ ಮತ್ತೊಬ್ಬ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಮಾತನಾಡಿ, ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ತಾವು ಸುಪ್ರೀಂಕೋರ್ಟ್‍ನ ನ್ಯಾಯಾಧೀಶರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದು, ಸ್ವಂತ ಮನೆಗೆ ಬಂದ ಅನುಭವವಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ತೆರವುಗೊಳಿಸುವುದು ಮತ್ತು ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತಂತೆ ನಡೆಸಿದ ವಿಚಾರಗಳನ್ನು ಈ ವೇಳೆ ಸ್ಮರಿಸಿದರು.

ತಾವು ಆರಂಭದಲ್ಲಿ ಈ ವಿಷಯಗಳ ವಿಚಾರಣೆ ಕೈಗೆತ್ತಿಕೊಂಡಾಗ ಎಲ್ಲಾ ವಿಚಾರಣೆಯಂತೆ ಇದೂ ಸಾಮಾನ್ಯವಾಗಿ ನಡೆದು ಮುಗಿಯುತ್ತದೆ ಎಂದು ಅನುಮಾನಗಳು ಕೇಳಿಬಂದಿದ್ದವು.ಆದರೆ, ಕಾಲ ಕಾಲಕ್ಕೆ ವಿಚಾರಣೆಗಳನ್ನು ತೀವ್ರಗೊಳಿಸಿ ಪ್ರತಿಬಾರಿಯೂ ವರದಿ ಪಡೆದಾಗ ಜನರಲ್ಲಿ ವಿಶ್ವಾಸ ಹೆಚ್ಚಾಗಿ, ಆಡಳಿತ ಯಂತ್ರವೂ ಚುರುಕಾಯಿತು ಎಂದರು.

ಬೆಂಗಳೂರಿನ ಗತ ವೈಭವವನ್ನು ಮರಳಿ ತಂದುಕೊಡುವ ನಿಟ್ಟಿನಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಸಂಘಟನೆ, ಒಂದು ಸಂಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ಸಂಘಟನಾತ್ಮಕ ಪ್ರಯತ್ನ ಎಂದು ತಿಳಿಸಿದರು.

ತಾವು ಪ್ರತಿ ಬಾರಿ ಅಧಿಕಾರಿಗಳಿಂದ ವರದಿ ಪಡೆಯುತ್ತಿದ್ದಾಗ ಬೆಂಗಳೂರಿನ ಸುಧಾರಣೆ ಪ್ರಗತಿ ಉತ್ತಮ ಹಾದಿಯಲ್ಲಿವೆ ಎಂಬ ಅಭಿಪ್ರಾಯ ಸ್ಪಷ್ಟವಾಗತೊಡಗಿತು. ಫ್ಲೆಕ್ಸ್, ಬ್ಯಾನರ್‍ಗಳನ್ನು ಕಾನೂನಿನ ಮೂಲಕ ಬಲವಂತವಾಗಿ ತೆರವುಗೊಳಿಸುವುದಕ್ಕಿಂತಲೂ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಮುಂದಾಗಿದ್ದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು.

ಬಹಳ ದಿನಗಳಿಂದ ಜೀವಂತವಾಗಿರುವ ಸಮಸ್ಯೆಗಳನ್ನು ಏಕಾ ಏಕಿ ಒಂದೇ ದಿನದಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಸಕಾರಾತ್ಮಕ ಚಿಂತನೆಗಳ ಮೂಲಕ ಪ್ರಗತಿಯತ್ತ ಹೆಜ್ಜೆ ಹಾಕಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವದ ಹಲವಾರು ಪ್ರಜಾಪ್ರಭುತ್ವದ ರಾಷ್ಟ್ರಗಳ ಪೈಕಿ ಭಾರತದ ಪ್ರಜಾಪ್ರಭುತ್ವದ ವಯಸ್ಸು ಅತ್ಯಂತ ಚಿಕ್ಕದು.ನೂರಾರು ವರ್ಷಗಳಿಂದ ಪ್ರಜಾಪ್ರಭುತ್ವ ಆಚರಿಸಿಕೊಂಡು ಬರುತ್ತಿರುವ ದೊಡ್ಡ ದೊಡ್ಡ ದೇಶಗಳಿಗಿಂತಲೂ ಅತಿ ಚಿಕ್ಕ ವಯಸ್ಸಿನಲ್ಲೇ ಭಾರತದ ಪ್ರಜಾಪ್ರಭುತ್ವ ಬಹಳಷ್ಟನ್ನು ಸಾಧಿಸಿದೆ.ಯಾವುದೇ ವಿಚಾರಗಳು ಪರಸ್ಪರ ಚರ್ಚೆಯಾಗಬೇಕು. ವಿಭಿನ್ನ ಆಲೋಚನೆಗಳು ಒಗ್ಗೂಡಿದಾಗ ಮತ್ತಷ್ಟು ಸುಧಾರಿತ ವಿಚಾರಗಳು ಹೊರ ಹೊಮ್ಮಲು ಸಾಧ್ಯ ಎಂದು ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕ ಕೆ.ವಿ.ತ್ರಿಲೋಕ್‍ಚಂದ್ರ ಮಾತನಾಡಿ, ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುವುದು ತಮ್ಮ ಇಲಾಖೆ. ಈವರೆಗೂ 2,76,405 ಪ್ರಕರಣಗಳು ದಾಖಲಾಗಿವೆ. 2017-18ರಲ್ಲಿ 450 ಪ್ರಕರಣಗಳು ದಾಖಲಾಗಿ ಎಲ್ಲವೂ ಇತ್ಯರ್ಥಗೊಂಡಿವೆ. 2018-19ರಲ್ಲಿ 400 ಪ್ರಕರಣಗಳು ದಾಖಲಾಗಿ, 396 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಇದೇ ವೇಳೆ ಆಲ್‍ನೈಲ್ ಮೂಲಕ ಆರ್‍ಟಿಐಗೆ ಅರ್ಜಿ ಸಲ್ಲಿಸುವ ವೆಬ್‍ಸೈಟ್‍ಗೆ ಚಾಲನೆ ನೀಡಲಾಯಿತು.

ಮಾಹಿತಿ ಆಯೋಗದ ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ