ಮೂರು ಪಕ್ಷಗಳಿಗೂ ಲೋಕಸಭೆ ಚುನಾವಣೆಗೆ ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು,ಫೆ.2- ಲೋಕಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ಪ್ರಮುಖ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗುವುದರ ಜೊತೆಗೆ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.

ಒಂದೆಡೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಕೈ ಜೋಡಿಸಿ ಚುನಾವಣೆ ಎದುರಿಸುವ ಬಗ್ಗೆ ಈವರೆಗೂ ಖಚಿತತೆ ಇಲ್ಲ. ಕಳೆದ ಒಂದು ವಾರದಿಂದ ದೋಸ್ತಿ ಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.

ಬಿಜೆಪಿಯನ್ನು ಸೋಲಿಸಬೇಕಾದರೆ ತಮ್ಮೆಲ್ಲ ವೈಮನಸ್ಸು ಮರೆತು ಒಂದಾಗಬೇಕೆಂಬ ಮಾತುಗಳು ಕೇಳಿಬಂದಿವೆಯಾದರೂ ಎರಡು ಪಕ್ಷಗಳು ಪರಸ್ಪರ ಜಿದ್ದಿಗೆ ಬಿದ್ದವರಂತೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ಕೂಡ ಸದ್ದಿಲ್ಲದೆ ಚುನಾವಣೆಗೆ ಕಾರ್ಯತಂತ್ರವನ್ನು ರೂಪಿಸುತ್ತಿದೆ.

ಈ ಬೆಳಗವಣಿಗೆಗಳ ನಡುವೆಯೇ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿಯಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿದ್ದರೆ ಕೆಲವು ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ.

ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಸಹಜವಾಗಿ ಕಾಂಗ್ರೆಸ್‍ನ ಹಲವಾರು ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಜೆಡಿಎಸ್ ಕೇಳುತ್ತಿರುವುದೇ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳನ್ನು.

ಕಳೆದ ವಾರ ಹಳೆ ಮೈಸೂರು ಭಾಗದ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ, ಹಾಸನ ಹಾಗೂ ಮಂಡ್ಯದಿಂದ ¾ಕೈ¿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಇನ್ನು ಜೆಡಿಎಸ್ ಗೆಲ್ಲುವ ಅವಕಾಶ ಹೆಚ್ಚಿರುವ ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ ಸೇರಿದಂತೆ ಕಾಂಗ್ರೆಸ್ ಸಂಸದರಿರುವ ಕ್ಷೇತ್ರಗಳಾದ ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರದ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ದೇವೇಗೌಡರ ಕೈ ಬಲಪಡಿಸಲು ಹತ್ತು ಸಂಸದರನ್ನು ರಾಜ್ಯದಿಂದ ಕಳಿಸಿಕೊಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದರು. ಕುಮಾರಸ್ವಾಮಿ ಹೇಳಿಕೆಯಿಂದ ಹಾಲಿ ಕಾಂಗ್ರೆಸ್ ಸಂಸದರಿಗೆ ನಡುಕ ಆರಂಭವಾಗಿದ್ದು, ಅವರೆಲ್ಲ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಮಲ್ಲಿಕಾರ್ಜುನ್ ಖರ್ಗೆ ಸಹಾಯ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣರನ್ನು ಕಣಕ್ಕಿಳಿಸಲು ರಣತಂತ್ರ ರೂಪಿಸಲಾಗುತ್ತಿದೆ.ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.ಇನ್ನು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದು, ಇದಕ್ಕೂ ಮುನ್ನವೇ ಮೈತ್ರಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎನ್ನಲಾಗಿದೆ.

ಹಾಗೊಂದು ವೇಳೆ ಜೆಡಿಎಸ್‍ನ ಒತ್ತಾಯಕ್ಕೆ ಮಣಿದು ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೊಡೆತ ಬೀಳಬಹುದೆಂಬ ಆತಂಕವೂ ಎದುರಾಗಿದೆ. ಅಲ್ಲದೆ ಟಿಕೆಟ್ ಕೈ ತಪ್ಪಿದರೆ ಕೆಲವರು ಪಕ್ಷಕ್ಕೆ ಗುಡ್ ಬೈ ಹೇಳಿ ದೂರ ಸರಿಯಬಹುದೆಂಬ ಭೀತಿಯೂ ಇದೆ.

ಬಿಜೆಪಿಯಲ್ಲೂ ಅದೇ ಕಥೆ:
ಇನ್ನು ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಹಾಲಿ 15 ಸಂಸದರನ್ನು ಹೊಂದಿದ್ದರೂ ಕಮಲ ಪಕ್ಷ ಕೆಲವು ಸಂಸದರಿಗೆ ಕೋಕ್ ನೀಡಿ ಹೊಸ ಮುಖಗಳಿಗೆ ಮಣೆ ಹಾಕುವ ಸಂಭವವಿದೆ.

ವಿಧಾನಸಭೆ ಚುನಾವಣೆಯಲ್ಲಿ ಕೆಲವು ಹೊಸ ಪ್ರಯೋಗಗಳನ್ನು ನಡೆಸಿದ್ದರಿಂದ ಬಿಜೆಪಿ 104 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ 40 ಸ್ಥಾನದಿಂದ 104 ಸ್ಥಾನಕ್ಕೇರಿದ್ದು ಸಾಮಾನ್ಯ ಮಾತಲ್ಲ.

ಹೀಗಾಗಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ಕೆಲವು ಸಂಸದರಿಗೆ ಕೊಕ್ ನೀಡಿ ಪಕ್ಷದ ನಿಷ್ಠಾವಂತರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನಮಂಥನ ನಡೆದಿದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಲಿ ಸಂಸದರಿಗೆ ಟಿಕೆಟ್ ಖಾತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹೀಗಾಗಿ ಯಾರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಆತಂಕ ಶುರುವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್‍ಕುಮಾರ್ ಕಟೀಲ್, ಬೆಳಗಾವಿ ಸುರೇಶ್ ಅಂಗಡಿ, ಧಾರವಾಡದ ಪ್ರಹ್ಲಾದ್ ಜೋಷಿಗೆ ಟಿಕೆಟ್ ನೀಡಬಾರದೆಂದು ಸ್ಥಳೀಯ ಕಾರ್ಯಕರ್ತರೇ ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ